ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2023-24ನೇ ಸಾಲಿನ ಬಜೆಟ್ ನಲ್ಲಿ ವಾಹನ ತೆರಿಗೆ ಹೆಚ್ಚಳ ಪ್ರಸ್ತಾಪ ಮಾಡಿದ್ದು, ಇದು ಕೇವಲ ವಾಣಿಜ್ಯ ಬಳಕೆ ವಾಹನಗಳಿಗೆ ಮಾತ್ರ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಮೋಟಾರು ವಾಹನ ತೆರಿಗೆಯನ್ನು ತಿದ್ದುಪಡಿ ಮೂಲಕ ಸರಳೀಕರಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದ್ದು, ಕೆಲವು ವರ್ಗಗಳ ವಾಹನಗಳ ಮೇಲೆ ವಿಧಿಸುವ ಪ್ರಸ್ತುತ ತೆರಿಗೆಯನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ. ಈ ತೆರಿಗೆ ಹೆಚ್ಚಳವು ವಾಣಿಜ್ಯ ಸರಕುಗಳ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ವೈಯಕ್ತಿಕ ವಾಹನಗಳಿಗೆ ಅಲ್ಲ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
“ವಾಹನ ತೆರಿಗೆ ಹೆಚ್ಚಳವು ತಕ್ಷಣವೇ ಜಾರಿಗೆ ಬರುವುದಿಲ್ಲ. ಕರ್ನಾಟಕ ಮೋಟಾರು ವಾಹನ ತೆರಿಗೆ ಮಸೂದೆಯನ್ನು ಮೊದಲು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಬೇಕು” ಎಂದು ಮೂಲಗಳು ತಿಳಿಸಿವೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ನಲ್ಲಿ ಸಾರಿಗೆ ಇಲಾಖೆಗೆ 2023-24ನೇ ಸಾಲಿಗೆ 10,500 ಕೋಟಿ ರೂ.ಗಳ ಆದಾಯ ಸಂಗ್ರಹದ ಗುರಿ ಹೊಂದಿದ್ದರೆ, ಸಿದ್ದರಾಮಯ್ಯನವರ ಬಜೆಟ್ ನಲ್ಲಿ ಆದಾಯ ಸಂಗ್ರಹದ ಗುರಿ 11,500 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.