ಮನೆ ಸ್ಥಳೀಯ ಅತ್ಯುತ್ತಮ ಸ್ವೀಪ್ ಚಟುವಟಿಕೆ ಕೈಗೊಂಡು ಮತದಾನ ಪ್ರಮಾಣ ಹೆಚ್ಚಿಸಿ: ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ

ಅತ್ಯುತ್ತಮ ಸ್ವೀಪ್ ಚಟುವಟಿಕೆ ಕೈಗೊಂಡು ಮತದಾನ ಪ್ರಮಾಣ ಹೆಚ್ಚಿಸಿ: ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ

0

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ವಿನೂತನವಾದ ಸ್ವೀಪ್ ಚಟುವಟಿಕೆ ನಡೆಸಿ ಮತದಾರರಿಗೆ ಜಾಗೃತಿ ಮೂಡಿಸುವ ಮೂಲಕ ಮತದಾನದ ಶೇಖಡವಾರು ಪ್ರಮಾಣ ಹೆಚ್ಚಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಕೆ.ಎಂ.ಗಾಯಿತ್ರಿ ಅವರು ತಿಳಿಸಿದರು.

ಲೋಕಸಭಾ ಚುನಾವಣೆ ಅಂಗವಾಗಿ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ವೀಪ್ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಚಟುವಟಿಕೆಯಡಿ ಮೈಸೂರು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ‘ಹಸ್ತಾಕ್ಷರ ಸಂಗ್ರಹ ಅಭಿಯಾನಕ್ಕೆ’ ಸಹಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು. 

ಗ್ರಾಮೀಣ ಭಾಗದ ಎಲ್ಲಾ ಸಾರ್ವಜನಿಕರಿಗೂ ಏಪ್ರಿಲ್ 26 ರಂದು ಮತದಾನ ಮಾಡುವಂತೆ ಅರಿವು ಮೂಡಿಸಬೇಕು. ಮತದಾನದ ಮಹತ್ವ ಕುರಿತು ಅವರಿಗೆ ಮನವರಿಕೆ ಮಾಡುವಂತಹ ಸ್ವೀಪ್ ಚಟುವಟಿಕೆ ನಡೆಸಬೇಕು ಎಂದು ಎಲ್ಲಾ ಗ್ರಾಮ ಪಂಚಾಯಿತಿಯ ಪಿಡಿಒ ಅವರಿಗೆ ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆಗಳಿಗೆ ಗುಣಮಟ್ಟದ ಮೂಲಭೂತ ಸೌಕರ್ಯವನ್ನು ಸಕಾಲಕ್ಕೆ ಒದಗಿಸಬೇಕು. ಪಿಡಿಒ ಅವರು ಚಲನವಲನ ವಹಿ ನಿರ್ವಹಿಸಿ, ಎಲ್ಲಾ ಮಾಹಿತಿ ನಮೂದಿಸಬೇಕು. ಮತಗಟ್ಟೆ ಅಧಿಕಾರಿಗಳ ಜೊತೆ ಚರ್ಚಿಸಿ ಅವರಿಗೆ ಅಗತ್ಯವಿರುವ ವಸ್ತುಗಳನ್ನು ನಿಗದಿತ ಸಮಯಕ್ಕೆ ಪೂರೈಸಲು ಕ್ರಮವಹಿಸಿ ಎಂದು ತಿಳಿಸಿದರು. 

ಮತಗಟ್ಟೆ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ನೆರಳು, ಪ್ರಾಥಮಿಕ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಅಗತ್ಯ ಸೌಲಭ್ಯಕ್ಕಾಗಿ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಬೇಕು. ವಿಶ್ರಾಂತಿ ಕೊಠಡಿ ಮೀಸಲಿರಸಲು ಕ್ರಮವಹಿಸಬೇಕು. ವಿಷೇಶ ಮತಗಟ್ಟೆಯನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿ ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರೂ ಕಡ್ಡಾಯವಾಗಿ ಸಿ-ವಿಜಿಲ್ ಆಪ್ ಡೌನ್ಲೌಡ್ ಮಾಡಿಕೊಳ್ಳಬೇಕು. ಚುನಾವಣಾ ಅಕ್ರಮಗಳು ಕಂಡುಬಂದರೆ ಕೂಡಲೇ ಆಪ್ ಮೂಲಕ ದೂರು ಸಲ್ಲಿಸಿ. ಪ್ರಥಮ ಬಾರಿಗೆ ಮತ ಹಾಕುವವರಿಗೆ ತಿಳುವಳಿಗೆ ನೀಡಲು ತರಬೇತಿ ಆಯೋಜಿಸಬೇಕು. ಹಿರಿಯ ನಾಗರಿಕರ ಸಹಾಯಕ್ಕಾಗಿ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಿ. ಒಟ್ಟಾರೆ ಯಾವುದೇ ಲೋಪ ಉಂಟಾಗದಂತೆ ಪರಸ್ಪರ ಚರ್ಚಿಸಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ಎಂದರು.

ಚುನಾವಣೆ ಸಿದ್ದತೆಯ ಜೊತೆಗೆ ಬರಗಾಲ ಅನೇಕ ಗ್ರಾಮಗಳನ್ನು ವ್ಯಾಪ್ತಿಸಿದ್ದು, ಸಮರ್ಪಕ ಕುಡಿಯುವ ನೀರಿನ ಪೂರೈಸಲು ನಿಗಾವಹಿಸಿ ಕೆಲಸ ಮಾಡಬೇಕು. ನರೇಗಾ ಯೋಜನೆಯಡಿ ಹೆಚ್ಚಿನ ಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ಗುಳೆ ಹೋಗುವುದನ್ನು ತಡೆಗಟ್ಟಬೇಕು. ಹೆಚ್ಚಾಗಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಸ್ವೀಪ್ ನೋಡಲ್ ಅಧಿಕಾರಿ ಶಾಂತ.ಎಂ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಧರಣೇಶ್, ಅನುಷ್ಠಾನ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು, ತಾ.ಪಂ. ಸಹಾಯಕ ನಿರ್ದೇಶಕರಾದ ಭವ್ಯ, ಗಂಗಾಧರ, ತಾಲ್ಲೂಕು ಪಂಚಾಯತ್ ಹಾಗೂ ತಾಲ್ಲೂಕು ಕಚೇರಿ ಸಿಬ್ಬಂದಿ, ಎಲ್ಲಾ ಗ್ರಾಮ ಪಂಚಾಯಿತಿಯ ಪಿಡಿಒ, ಕಾರ್ಯದರ್ಶಿ, ಎಸ್ಡಿಎಎ ಮತ್ತು ಡಿಇಒ ಹಾಜರಿದ್ದರು.