ಇಂದೋರ್: ಭಾರತದ 109 ರನ್’ಗಳಿಗೆ ದಿಟ್ಟ ಉತ್ತರ ನೀಡುತ್ತಿರುವ ಆಸ್ಟ್ರೇಲಿಯಾ, ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಂತ್ಯಕ್ಕೆ 54 ಓವರ್’ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ.
ಈ ಮೂಲಕ 47 ರನ್‌ಗಳ ಮುನ್ನಡೆ ಗಳಿಸಿದೆ. ಅಲ್ಲದೆ ಇಂದೋರ್ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ. ಮೊದಲ ದಿನದಾಟದಲ್ಲೇ ಮ್ಯಾಥ್ಯೂ ಕುನೇಮನ್ (16ಕ್ಕೆ 5 ವಿಕೆಟ್) ಸ್ಪಿನ್ ಮೋಡಿಗೆ ಸಿಲುಕಿದ ಭಾರತ ಕೇವಲ 109 ರನ್ನಿಗೆ ಆಲೌಟ್ ಆಗಿತ್ತು.
ಬಳಿಕ ಎಡಗೈ ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ ಆಕರ್ಷಕ ಅರ್ಧಶತಕದ (60) ನೆರವಿನಿಂದ ಆಸ್ಟ್ರೇಲಿಯಾ ಇನಿಂಗ್ಸ್ ಮುನ್ನಡೆ ಗಳಿಸಲು ಸಾಧ್ಯವಾಗಿದೆ.
ಆಸ್ಟ್ರೇಲಿಯಾದ ಸ್ಪಿನ್ನರ್ ಮ್ಯಾಥ್ಯೂ ಕುನೇಮನ್ 16 ರನ್ನಿಗೆ ಐದು ವಿಕೆಟ್ ಕಬಳಿಸುವ ಮೂಲಕ ಜೀವನಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದರು.
ಟಾಸ್ ಗೆದ್ದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ನಾಯಕ ರೋಹಿತ್ ಶರ್ಮಾ (12) ಸ್ಟಂಪ್ ಔಟ್ ಆದರು. ಕೆ.ಎಲ್. ರಾಹುಲ್ ಸ್ಥಾನಕ್ಕೆ ಆಯ್ಕೆಯಾಗಿದ್ದ ಶುಭಮನ್ ಗಿಲ್ (21) ಸಹ ನಿರಾಸೆ ಮೂಡಿಸಿದರು. ಚೇತೇಶ್ವರ ಪೂಜಾರ (1), ರವೀಂದ್ರ ಜಡೇಜ (4) ಹಾಗೂ ಶ್ರೇಯಸ್ ಅಯ್ಯರ್ (0) ಎರಡಂಕಿಯನ್ನು ದಾಟಲಿಲ್ಲ. ಪರಿಣಾಮ 45 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿತು.
ಈ ವೇಳೆ ನಿರೀಕ್ಷೆ ಮೂಡಿಸಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ (22) ಸಹ ಔಟ್ ಆಗುವುದರೊಂದಿಗೆ ಭಾರತಕ್ಕೆ ಬಲವಾದ ಹೊಡೆತ ಬಿತ್ತು. ಊಟದ ವಿರಾಮಕ್ಕೂ ಸ್ವಲ್ಪ ಮೊದಲು ಶ್ರೀಕರ್ ಭರತ್ (17) ಸಹ ಪೆವಿಲಿಯನ್ ಸೇರಿದರು.
ಈ ವೇಳೆ ಭಾರತ ಏಳು ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿತ್ತು. ಇದಾದ ಬಳಿಕವೂ ಭಾರತ ಚೇತರಿಸಿಕೊಳ್ಳಲಿಲ್ಲ. ಅಕ್ಷರ್ ಪಟೇಲ್ 12 ರನ್ ಗಳಿಸಿ ಔಟಾಗದೆ ಉಳಿದರು. ರವಿಚಂದ್ರನ್ ಅಶ್ವಿನ್ (3), ಉಮೇಶ್ ಯಾದವ್ (17) ಹಾಗೂ ಮೊಹಮ್ಮದ್ ಸಿರಾಜ್ (0) ನಿರಾಸೆ ಮೂಡಿಸಿದರು. ನೇಥನ್ ಲಯನ್ ಮೂರು ಮತ್ತು ಟಾಡ್ ಮರ್ಫಿ ಒಂದು ವಿಕೆಟ್ ಗಳಿಸಿದರು.
ಬಳಿಕ ಬ್ಯಾಟಿಂಗ್ ನಡೆಸಿದ ಆಸೀಸ್’ಗೆ ಆರಂಭದಲ್ಲೇ ಟ್ರಾವಿಸ್ ಹೆಡ್ (9) ವಿಕೆಟ್ ನಷ್ಟವಾಯಿತು. ಈ ನಡುವೆ ಮಾರ್ನಸ್ ಲಾಬುಷೇನ್ (31) ಜೊತೆ ದ್ವಿತೀಯ ವಿಕೆಟ್‌ಗೆ 96 ರನ್’ಗಳ ಮಹತ್ವದ ಜೊತೆಯಾಟ ಕಟ್ಟಿದ ಖ್ವಾಜಾ ತಂಡವನ್ನು ಅಪಾಯದಿಂದ ಪಾರು ಮಾಡಿದರು.
147 ಎಸೆತಗಳನ್ನು ಎದುರಿಸಿದ ಖ್ವಾಜಾ 60 ರನ್ ಗಳಿಸಿದರು. ನಾಯಕ ಸ್ಟೀವನ್ ಸ್ಮಿತ್ 26 ರನ್ ಗಳಿಸಿ ಔಟ್ ಆದರು. ಭಾರತದ ಪರ ರವೀಂದ್ರ ಜಡೇಜ ನಾಲ್ಕು ವಿಕೆಟ್ ಕಬಳಿಸಿದರು.