ಭಾರತ ಕ್ರಿಕೆಟ್ ತಂಡ ನಾಳೆಯಿಂದ (ಸೆಪ್ಟೆಂಬರ್ 22) ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಐಸಿಸಿ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗುವ ಮೊದಲು ಎರಡೂ ತಂಡಗಳಿಗೆ ಈ ಸರಣಿಯು ಅಂತಿಮ ತಯಾರಿಯಾಗಿದೆ.
ಆಸ್ಟ್ರೇಲಿಯಾ ತಂಡ ಈಗಾಗಲೇ ಭಾರತಕ್ಕೆ ತಲುಪಿದ್ದು, ಇಂದು ಅಭ್ಯಾಶ ಶುರು ಮಾಡಲಿದ್ದಾರೆ. ಇತ್ತ ಟೀಮ್ ಇಂಡಿಯಾ ಕೂಡ ಏಷ್ಯಾಕಪ್ 2023 ಪ್ರಶಸ್ತಿ ಎತ್ತಿ ಹಿಡಿದ ದಿನವೇ ತವರಿಗೆ ಮರಳಿದ್ದು, ಇಂದು ಎಲ್ಲ ಆಟಗಾರರು ಒಟ್ಟಾಗಿ ಪ್ರ್ಯಾಕ್ಟೀಸ್ ಶುರುಮಾಡಿದ್ದಾರೆ.
ಆಸೀಸ್ ವಿರುದ್ಧದ ಈ ಸರಣಿಯ ಮೊದಲೆರಡು ಪಂದ್ಯಗಳಿಗೆ ಟೀಮ್ ಇಂಡಿಯಾ 15 ಸದಸ್ಯರ ಬಳಗವನ್ನು ಪ್ರಕಟಿಸಿದ್ದು, ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಮೊದಲ ಎರಡು ಪಂದ್ಯಗಳಿಂದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದು, ಮೂರನೇ ಪಂದ್ಯದ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಈ ಸರಣಿಯ ಮೂಲಕ ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾಗೆ ಮರಳಿದ್ದಾರೆ. ಅಂದರೆ ಏಷ್ಯಾಕಪ್ ಟೂರ್ನಿಗೆ ಅಶ್ವಿನ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿರುವುದು ವಿಶೇಷ. ಒಂದು ವೇಳೆ ಆಸ್ಟ್ರೇಲಿಯಾ ವಿರುದ್ಧ ಮಿಂಚಿದರೆ ಏಕದಿನ ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯಬಹುದು.
ಇತ್ತ ಆಸ್ಟ್ರೇಲಿಯಾದ ಪರವಾಗಿ, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಸ್ಟೀವ್ ಸ್ಮಿತ್ ಗಾಯಗೊಂಡು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ತಪ್ಪಿಸಿಕೊಂಡಿದ್ದರು. ಇವರೀಗ ಭಾರತ ಸರಣಿಗೆ ಮರಳಿದ್ದಾರೆ. ಗ್ಲೆನ್ ಮ್ಯಾಕ್ಸ್ ವೆಲ್ ಕೂಡ ತಂಡ ಸೇರಿಕೊಂಡಿದ್ದಾರೆ.
ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಯು ಸೆಪ್ಟೆಂಬರ್ 22 ರಿಂದ ನಡೆಯಲಿದೆ. ಈ ಪಂದ್ಯ ಮೊಹಾಲಿ, ಇಂದೋರ್ ಮತ್ತು ರಾಜ್‌ಕೋಟ್‌ನಲ್ಲಿ ಆಯೋಜಿಸಲಾಗಿದೆ. ಸ್ಪೋರ್ಟ್ಸ್ 18 ಇಂಗ್ಲಿಷ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಜೊತೆಗೆ ಪಂದ್ಯವನ್ನು JioCinema ದಲ್ಲಿ ಉಚಿತವಾಗಿ ವೀಕ್ಷಿಸಬಹುದು. ಎಲ್ಲ ಪಂದ್ಯಗಳು ಮಧ್ಯಾಹ್ನ 1:30ಕ್ಕೆ ಶುರುವಾಗಲಿದೆ.
ಮೊದಲ 2 ಪಂದ್ಯಗಳಿಗೆ ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಆಷ್ಟನ್ ಅಗರ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಾರ್ನರ್, ಆಡಮ್ ಝಂಪಾ, ಮಿಚೆಲ್ ಸ್ಟಾರ್ಕ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೋನಿಸ್, ಮಿಚ್ ಮಾರ್ಷ್, ಸೀನ್ ಅಬಾಟ್, ಕ್ಯಾಮರೂನ್ ಗ್ರೀನ್.