ಬೆಂಗಳೂರು: ಐಎನ್ ಡಿಐಎ ಒಕ್ಕೂಟ ಒಂದು ಫೋಟೋ ಶೂಟ್ ಅಷ್ಟೇ ಆಗಿತ್ತು. ಆ ಒಕ್ಕೂಟದವರಿಗೆ ನೀತಿ, ನಿಯತ್ತು, ನೇತೃತ್ವ ಮೂರೂ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಬೆಂಗಳೂರಿನಲ್ಲಿ ಐಎನ್ ಡಿಐಎ ಮೈತ್ರಿಕೂಟದ ಪಕ್ಷಗಳ ನಡುವೆ ಬಿರುಕು ಮೂಡಿರುವ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅದೊಂದು ಅಸಹಜ, ಅಸ್ವಾಭಾವಿಕ ಒಪ್ಪಂದ ಆಗಿತ್ತು. ಹಾಗಾಗಿ ಐಎನ್ ಡಿಐಎ ಒಕ್ಕೂಟ ಸಾಯುತ್ತಿದೆ. ನಿತೀಶ್ ಕುಮಾರ್ ಬಿಜೆಪಿಗೆ ಸೇರುವ ಬಗ್ಗೆ ನಾನು ಏನೂ ಮಾತಾಡಲ್ಲ. ಅವರು ಪಕ್ಷ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಮಾತಾಡಲು ನಾನು ಸೂಕ್ತವೂ ಅಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದು ಮರಳಿ ಬಿಜೆಪಿ ಸೇರ್ಪಡೆ ವೇಳೆ ಗೈರಾಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಉಪರಾಷ್ಟ್ರಪತಿ ಜೊತೆ ಸಭೆಯಲ್ಲಿದ್ದ ಕಾರಣ ಭಾಗಿಯಾಗಿಲ್ಲ ಎಂದರು.
ಶೆಟ್ಟರ್ ಪಕ್ಷ ಸೇರ್ಪಡೆ ವೇಳೆ ಇನ್ನೊಂದು ಅರ್ಧ ಗಂಟೆಯಲ್ಲಿ ಸೇರ್ಪಡೆ ಆಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ನನಗೆ ಕರೆ ಮಾಡಿ ಹೇಳಿದ್ದರು. ಜಗದೀಶ್ ಶೆಟ್ಟರ್ ಅವರು ಬಿಜೆಪಿಯಲ್ಲೇ ಇದ್ದವರು. ಶೆಟ್ಟರ್ ವಾಪಸ್ ಬಂದಿದ್ದು ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಶೆಟ್ಟರ್ ಅವರು ಬಂದಿದ್ದು ಬಿಜೆಪಿಗೆ ಅನುಕೂಲ ಆಗುತ್ತದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.