ಹುಲುನ್ಬುಯರ್: ಹಾಕಿ ಕ್ರೀಡೆಯಲ್ಲೂ ಪಾಕಿಸ್ತಾನ ವಿರುದ್ದ ಭಾರತದ ಪ್ರಾಬಲ್ಯ ಮುಂದುವರಿದಿದೆ. ಶನಿವಾರ (ಸೆ.14) ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗುಂಪು ಹಂತದ ಪಂದ್ಯದಲ್ಲಿ ಭಾರತವು ಪಾಕ್ ವಿರುದ್ದ 2-1 ಅಂತರದಿಂದ ಗೆಲುವು ಸಾಧಿಸಿದೆ.
ಕೂಟದಲ್ಲಿ ಅಜೇಯರಾಗಿರುವ ಭಾರತವು ಮತ್ತೊಂದು ಗೆಲುವಿನೊಂದಿಗೆ ಗುಂಪು ಹಂತ ಯಶಸ್ವಿಯಾಗಿ ಮುಗಿಸಿದೆ.
ಪಂದ್ಯ ಗೆಲ್ಲುವ ಫೇವರೆಟ್ ಆಗಿ ಕಣಕ್ಕಿಳಿದಿದ್ದ ಹಾಲಿ ಚಾಂಪಿಯನ್ ಹರ್ಮನ್ ಪ್ರೀತ್ ಬಳಗಕ್ಕೆ ಪಾಕಿಸ್ತಾನವು ಶಾಕ್ ನೀಡಿತು. ಮೊದಲ ಅವಧಿಯ ಆಟದಲ್ಲಿಯೇ ಪಾಕಿಸ್ತಾನದ ಅಹಮದ್ ನದೀಂ ಮೊದಲ ಗೋಲು ಬಾರಿಸಿ ಮುನ್ನಡೆ ಒದಗಿಸಿದರು.
ಭಾರತದ ಡಿಫೆನ್ಸ್ ಕೈಕೊಟ್ಟರೂ ಕೂಡಲೇ ಎಚ್ಚೆತ್ತ ಆಟಗಾರರು ಪ್ರತಿ ದಾಳಿ ನಡೆಸಿದರು. ಸ್ವಲ್ಪ ಸಮಯದ ನಂತರ, ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಾಗ ನಾಯಕ ಹರ್ಮನ್ ಪ್ರೀತ್ ಸಿಂಗ್ ಡ್ರ್ಯಾಗ್-ಫ್ಲಿಕ್ ನೊಂದಿಗೆ ಭಾರತಕ್ಕೆ ಮೊದಲ ಗೋಲು ಬಾರಿಸಿ ಪಂದ್ಯವನ್ನು ಹತೋಟಿಗೆ ತಂದರು. ಎರಡನೇ ಕ್ವಾರ್ಟರ್ ಆರಂಭವಾಗುತ್ತಿದ್ದಂತೆ, ಭಾರತವು ತನ್ನ ಆಕ್ರಮಣಕಾರಿ ಪ್ರಯತ್ನಗಳನ್ನು ತೀವ್ರಗೊಳಿಸಿತು. ಹರ್ಮನ್ಪ್ರೀತ್ ಪೆನಾಲ್ಟಿ ಸ್ಪಾಟ್ನಿಂದ ಗೋಲು ಹೊಡೆದು ಭಾರತದ ಮುನ್ನಡೆಯನ್ನು ಹೆಚ್ಚಿಸಿದರು.
ಪಾಕಿಸ್ತಾನದ ಅಹಮದ್ ನದೀಂ ಮತ್ತು ಅಜಾಝ್ ಅಹಮದ್ ಗೋಲು ಗಳಿಸಲು ಹಲವು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಭಾರತದ ಗೋಲು ಕೀಪರ್ ಕೃಷ್ಣನ್ ಕುಮಾರ್ ಸಾರ್ಥಕ್ ಅವರು ಅತ್ಯದ್ಭುತ ಆಟವಾಡಿ ಎರಡು ನಿರ್ಣಾಯಕ ಗೋಲು ತಡೆದರು. ಅಂತಿಮವಾಗಿ ಭಾರತವು 2-1 ಅಂತರದಿಂದ ಗೆಲುವು ಸಾಧಿಸಿತು.
ಅಂತಿಮ ಅವಧಿಯಲ್ಲಿ ವಹೀದ್ ಅಶ್ರಫ್ ರಾಣಾ ಮತ್ತು ಸುಖ್ಜೀತ್ ಸಿಂಗ್ ಗೆ ನಡುವೆ ಜಗಳವೂ ನಡೆಯಿತು. ಪಾಕಿಸ್ತಾನದ ಆಟಗಾರ ವಹೀದ್ ಅವರಿಗೆ ಹಳದಿ ಕಾರ್ಡ್ ನೀಡಲಾಯಿತು. ಅವರನ್ನು 10 ನಿಮಿಷಗಳ ಕಾಲ ಪಂದ್ಯದಿಂದ ಅಮಾನತು ಮಾಡಲಾಯಿತು. ಕೊನೆಯ ಕ್ಷಣಗಳಲ್ಲಿ ಭಾರತದ ಮನ್ಪ್ರೀತ್ ಸಿಂಗ್ ಅವರನ್ನು ಐದು ನಿಮಿಷಗಳ ಅಮಾನತು ಮಾಡಲಾಯಿತು.
ಈ ಪಂದ್ಯದೊಂದಿಗೆ ಭಾರತವು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್ ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ.