ಇಂಗ್ಲೆಂಡ್(England): ಸುಮಾರು 23 ವರ್ಷಗಳ ಬಳಿಕ ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲುವಿನ ತವಕದಲ್ಲಿರುವ ಭಾರತ ಮಹಿಳಾ ತಂಡವು ಎರಡನೇ ಏಕದಿನ ಪಂದ್ಯದಲ್ಲಿ ಬುಧವಾರ ಆತಿಥೇಯ ತಂಡದ ಸವಾಲು ಎದುರಿಸಲಿದೆ.
1999ರಲ್ಲಿ ಭಾರತ ಮಹಿಳಾ ತಂಡವು ಇಂಗ್ಲೆಂಡ್‌ನಲ್ಲಿ 2–1ರಿಂದ ಸರಣಿ ಜಯಿಸಿತ್ತು. ಆ ಸರಣಿಯಲ್ಲಿ ಅಂಜುಮ್ ಚೋಪ್ರಾ ತಲಾ ಒಂದು ಶತಕ ಮತ್ತು ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ನೆರವಾಗಿದ್ದರು.
ಈ ಬಾರಿ ಟಿ20 ಸರಣಿಯನ್ನು 1–2ರಿಂದ ಕಳೆದುಕೊಂಡಿರುವ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ, ಏಕದಿನ ಸರಣಿಯ ಮೊದಲ ಹಣಾಹಣಿಯಲ್ಲಿ ಆತಿಥೇಯ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿತ್ತು. ಭಾನುವಾರ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ಪರ ಅನುಭವಿ ಆಟಗಾರ್ತಿಯರು ಕಣಕ್ಕಿಳಿದಿರಲಿಲ್ಲ. ಆದರೆ ಭಾರತ ತಂಡದ ಪ್ರದರ್ಶನ ಉತ್ತಮವಾಗಿತ್ತು. ಅದೇ ಲಯದೊಂದಿಗೆ ಮುನ್ನುಗ್ಗುವ ಛಲದಲ್ಲಿ ತಂಡವಿದೆ. ವೇಗಿ ಜೂಲನ್ ಗೋಸ್ವಾಮಿ ಅವರಿಗೆ ಇದು ವಿದಾಯದ ಸರಣಿಯಾಗಿದೆ.
ಮೊದಲ ಪಂದ್ಯದಲ್ಲಿ ಉಪನಾಯಕಿ ಸ್ಮೃತಿ ಮಂದಾನ , ವಿಕೆಟ್ ಕೀಪರ್ ಯಷ್ಟಿಕಾ ಭಾಟಿಯಾ ಮತ್ತು ಹರ್ಮನ್‌ಪ್ರೀತ್ ಕೌರ್ ಬ್ಯಾಟ್‌ನಿಂದ ರನ್ ಹರಿದುಬಂದಿದ್ದವು. ಮಧ್ಯಮಕ್ರಮಾಂಕ ಮತ್ತು ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ ಲಯ ಕಂಡುಕೊಳ್ಳುವ ವಿಶ್ವಾಸ ಹರ್ಮನ್‌ಪ್ರೀತ್ ಅವರಿಗಿದೆ. ಮೊದಲ ಪಂದ್ಯ ಕೈಚೆಲ್ಲಿರುವ ಇಂಗ್ಲೆಂಡ್ ಕೂಡ ತಿರುಗೇಟು ನೀಡುವ ತವಕದಲ್ಲಿದೆ.
ತಂಡಗಳು: ಭಾರತ: ಹರ್ಮನ್‌ಪ್ರೀತ್ ಕೌರ್ (ಸಿ), ಸ್ಮೃತಿ ಮಂದಾನ, ಶಫಾಲಿ ವರ್ಮಾ, ಸಬ್ಬಿನೇನಿ ಮೇಘನಾ, ದೀಪ್ತಿ ಶರ್ಮಾ, ಯಷ್ಟಿಕಾ ಭಾಟಿಯಾ, ಪೂಜಾ ವಸ್ತ್ರಕಾರ್, ಸ್ನೇಹ್ ರಾಣಾ, ರೇಣುಕಾ ಠಾಕೂರ್, ಮೇಘನಾ ಸಿಂಗ್, ರಾಜೇಶ್ವರಿ ಗಾಯಕವಾಡ, ಹರ್ಲೀನ್ ಡಿಯೋಲ್, ದಯಾಳನ್ ಹೇಮಲತಾ, ಸಿಮ್ರಾನ್ ದಿಲ್ ಬಹಾದೂರ್, ಜೂಲನ್ ಗೋಸ್ವಾಮಿ, ತಾನಿಯಾ ಭಾಟಿಯಾ ಮತ್ತು ಜೆಮಿಮಾ ರಾಡ್ರಿಗಸ್.ಇಂಗ್ಲೆಂಡ್: ಆ್ಯಮಿ ಜೋನ್ಸ್, ಟಾಮಿ ಬಿಮೊಂಟ್, ಲಾರೆನ್ ಬೆಲ್, ಮೈಯಾ ಬೌಷಿಯರ್, ಆಲಿಸ್ ಕ್ಯಾಪ್ಸೆ, ಕೇಟ್ ಕ್ರಾಸ್, ಫ್ರೇಯಾ ಡೇವಿಸ್, ಆಲಿಸ್ ಡೇವಿಡ್‌ಸನ್-ರಿಚರ್ಡ್ಸ್, ಚಾರ್ಲಿ ಡೀನ್, ಸೋಫಿಯಾ ಡಂಕ್ಲಿ, ಸೋಫಿ ಎಕ್ಲೆಸ್ಟೋನ್, ಫ್ರೇಯಾ ಕೆಂಪ್, ಇಸ್ಸಿ ವಾಂಗ್ ಮತ್ತು ಡ್ಯಾನಿ ವ್ಯಾಟ್ .
ಪಂದ್ಯ ಆರಂಭ: ಮಧ್ಯಾಹ್ನ 3.30
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್