ಮನೆ ರಾಜ್ಯ ಕೋವಿಡ್ ಉಪಟಳದ ನಿರ್ವಹಣೆಯಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮಿದ ಭಾರತ: ಅಮಿತ್ ಶಾ

ಕೋವಿಡ್ ಉಪಟಳದ ನಿರ್ವಹಣೆಯಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮಿದ ಭಾರತ: ಅಮಿತ್ ಶಾ

0
https://www.youtube.com/channel/UCmDoYGj_oDaxpT_t7Pa9iEQ

ಬೆಂಗಳೂರು (Bengaluru): ಕೋವಿಡ್ ಉಪಟಳದ ನಿರ್ವಹಣೆಯಲ್ಲಿ ಭಾರತವು ವಿಶ್ವ ನಾಯಕನಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.    

ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯ ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ ನಗರದಲ್ಲಿ ಆಯೋಜಿಸಿದ್ದ ಸಂಕಲ್ಪದಿಂದ ಸಿದ್ದಿ ಸಮ್ಮೇಳನದ ಮೂರನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್-19 ರ ಸೋಂಕು ವ್ಯಾಪಿಸುತ್ತಿದ್ದಂತೆಯೇ ಬೃಹತ್ ರಾಷ್ಟ್ರಗಳಲ್ಲೂ ಕೂಡಾ ಆರ್ಥಿಕತೆ ಕುಸಿದಿದ್ದು ಮಾತ್ರವಲ್ಲದೇ, ಕೋವಿಡ್ ಉಪಟಳದ ನಿಯಂತ್ರಣದಲ್ಲಿ ವಿಫಲತೆ ಕಂಡಿದ್ದು ಸತ್ಯ. ಆದರೆ, 130 ಕೋಟಿಗೂ ಹೆಚ್ಚು ಜನ ಸಂಖ್ಯೆ ಹೊಂದಿರುವ ಭಾರತದಲ್ಲಿ 100 ಕೋಟಿಗೂ ಹೆಚ್ಚು ಜನ ಸಂಖ್ಯೆಗೆ ತಲಾ ಎರಡು ಡೋಸ್ ನಂತೆ 200 ಕೋಟಿ ಲಸಿಕೆ ಹಾಕಿರುವುದು ಒಂದು ದಾಖಲೆ ಎಂದು ತಿಳಿಸಿದರು.

ಕೋವಿಡ್ ಒಂದೆಡೆ ಔಷಧಿಗಳು ಇಲ್ಲ. ಮತ್ತೊಂದೆಡೆ ಚಿಕಿತ್ಸೆ ಇಲ್ಲ. ಮಗದೊಂದೆಡೆ ಲಸಿಕೆ ಇಲ್ಲ.  ಇನ್ನೊಂದೆಡೆ ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟ. ಇಂತಹ ಸಂದರ್ಭದಲ್ಲಿ ಸ್ವದೇಶಿ ಲಸಿಕೆ ತಯಾರಿಕೆಗೆ ಪ್ರೋತ್ಸಾಹ ನೀಡಿ, ದೇಶದ ಎಲ್ಲರಿಗೆ ಉಚಿತ ಲಿಸಿಕೆ ನೀಡಿ, ಕೋವಿನ್ ಆಪ್ ಮೂಲಕ ಲಸಿಕೆ ಪಡೆದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ, ಕೋವಿಡ್‌ ನಿಂದ ಮೊದಲು ಸುಧಾರಿಸಿಕೊಂಡ ಮೊದಲ ರಾಷ್ಟ್ರ ಭಾರತ ಎಂದು ತಿಳಿಸಲು ಹೆಮ್ಮೆಯಾಗುತ್ತದೆ.

ಕೋವಿಡ್ ಸಂದರ್ಭದಲ್ಲಿ ಬಡತನ ರೇಖೆಗಿಂತಲೂ ಕೆಳಗಿರುವ ಕುಟುಂಬಗಳಿಗೆ ಸತತ ಎರಡು ವರ್ಷಗಳ ಕಾಲ ಕೇಂದ್ರ ಸರ್ಕಾರ ಉಚಿತವಾಗಿ ಆಹಾರ ಧಾನ್ಯಗಳನ್ನು ಪೂರೈಸಿ, 80 ಕೋಟಿ ಜನ ಸಂಖ್ಯೆಯ ಹಸಿವು ನೀಗಿಸಿ ಅವರ ಜೀವ ಮತ್ತು ಜೀವನಕ್ಕೆ ಭದ್ರತೆಯನ್ನು ಒದಗಿಸಿ, ಇಡೀ ಜಗತ್ತಿಗೆ ಭಾರತೀಯ ಆರ್ಥಿಕತೆಯ ಮಾನವೀಯ ಮುಖವನ್ನು ಪ್ರದರ್ಶಿಸಿದೆ ಎಂದು ಹೇಳಿದರು. 

ಸರ್ವವ್ಯಾಪಿ ಸರ್ವಸ್ಪರ್ಶಿ

ಗ್ರಾಮೀಣ ಭಾರತದಲ್ಲಿ ಸೂರು ಇಲ್ಲದವರಿಗೆ ಸೂರು ಕಲ್ಪಿಸಿ, ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಿ, ಉರುವಲು ಸೌದೆಯನ್ನು ಬಳಸಿ ಅಡುಗೆ ಮಾಡುತ್ತಿದ್ದ ಮಹಿಳೆಯರ ಆರೋಗ್ಯ ಕಾಪಾಡಲು ಅಡುಗೆ ಅನಿಲದ ಸಿಲಿಂಡರ್‌ ಗಳನ್ನು ಉಚಿತವಾಗಿ ಒದಗಿಸಿ ಹಾಗೂ ಬೆಳಕು ಇಲ್ಲದೇ ಕತ್ತಲಲ್ಲೇ ಜೀವಿಸುತ್ತಿದ್ದ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಎಲ್ಲೆಡೆ ಸಂಪತ್ತು ಸೃಜಿಸಿ, ಕೇಂದ್ರ ಸರ್ಕಾರ ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿ ಸರ್ಕಾರ ಎನಿಸಿದೆ ಎಂದು ಅಮಿತ್ ಶಾ ಅವರು ಬಣ್ಣಿಸಿದರು.

ಸ್ವಸ್ಥ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಸ್ವಚ್ಛ ಭಾರತ ಯೋಜನೆಯನ್ನು ಏಕಕಾಲಕ್ಕೆ ದೇಶವಿಡೀ ಅನುಷ್ಠಾನಕ್ಕೆ ತಂದದ್ದು ಮಾತ್ರವಲ್ಲ, ಇಡೀ ಪರಿಸರವನ್ನು ಸುಧಾರಿಸಿದ ಕೀರ್ತಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ್ದಾಗಿದೆ ಎಂದರು.  

ಬ್ಯಾಕ್ ಅಪ್ ಫಾರ್ ಸ್ಟಾರ್ಟ್ ಅಪ್ 

ಕೇಂದ್ರ ಸರ್ಕಾರವು ನವೋದ್ಯಮಗಳಿಗೆ ಬೆನ್ನೆಲುಬಾಗಿ ಹಾಗೂ ಬೆಂಬಲವಾಗಿ ನಿಲ್ಲುವ ಹಲವು ಯೋಜನೆಗಳನ್ನು ರೂಪಿಸಲಿದೆ. ಹೊಸ ಅವಿಷ್ಕಾರಗಳಿಗೆ ಪೇಟೆಂಟ್‌ ಗಳನ್ನು ಪಡೆಯಲು, ಬೌದ್ದಿಕ ಹಕ್ಕು (ಇಂಟೆಲೆಕ್ಚುವಲ್ ಪ್ರಾಪರ್ಟಿ ರೈಟ್ಸ್) ಕಾಯ್ದುಕೊಳ್ಳುವ ವಿಧಾನಗಳನ್ನು ಸರಳೀಕರಿಸಲು ಕ್ರಮ ವಹಿಸಲಾಗಿದೆ. 

ಸರಕು ಮತ್ತು ಸೇವಾ ತೆರಿಗೆ, ಆಮದು ಮತ್ತು ರಫ್ತು ಕ್ಷೇತ್ರಗಳಲ್ಲಿ ಸುಧಾರಣೆ ಹಾಗೂ ಸುಲಭ ವ್ಯವಹಾರಿಕ ಚಟುವಟಿಕೆ (ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್), ಎಲ್ಲದರ ಫಲವಾಗಿ ಭಾರತವು ವಿಶ್ವದಲ್ಲಿಯೇ ಅತೀ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. 

ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ಒತ್ತು ನೀಡಿ ಎಂದು ಭಾರತೀಯ ಕೈಗಾರಿಕಾ ಒಕ್ಕೂಟಕ್ಕೆ ಸಲಹೆ ನೀಡಿದ ಅಮಿತ್ ಶಾ ಅವರು ಕೈಗಾರಿಕಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಒಕ್ಕೂಟವು ವೇದಿಕೆಯಾಗಲಿ ಎಂದು ಆಶಿಸಿದರು.