ನವದೆಹಲಿ : ಭಾರತವು ಇಂದು ಅಮೆರಿಕ ನೇತೃತ್ವದ ಜಾಗತಿಕ ತಂತ್ರಜ್ಞಾನ ಮೈತ್ರಿಕೂಟವಾದ ʻಪ್ಯಾಕ್ಸ್ ಸಿಲಿಕಾʼಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ. ಇದು ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್‌ಗಳ ಸರಬರಾಜು ಸರಪಳಿಗಳನ್ನು ಸುರಕ್ಷಿತಗೊಳಿಸುವ ಉದ್ದೇಶದೊಂದಿಗೆ ರಚಿತವಾದ ಒಂದು ಪ್ರಮುಖ ಒಕ್ಕೂಟವಾಗಿದೆ.
ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್‌ನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಅಮೆರಿಕ ರಾಜ್ಯ ಸಚಿವಾಲಯದ ಆರ್ಥಿಕ ವಿಷಯಗಳ ಅಂಡರ್ ಸೆಕ್ರೆಟರಿ ಜೇಕಬ್ ಹೆಲ್‌ಬರ್ಗ್ ಮತ್ತು ಅಮೆರಿಕಾದ ಭಾರತದ ರಾಯಭಾರಿ ಸರ್ಜಿಯೊ ಗೋರ್ ಅವರು ʻಪ್ಯಾಕ್ಸ್ ಸಿಲಿಕಾʼ ಘೋಷಣೆಗೆ ಸಹಿ ಹಾಕಿದರು. ಈ ಮೂಲಕ ಭಾರತ ಈ ಗುಂಪಿನ 11ನೇ ಸದಸ್ಯ ರಾಷ್ಟ್ರವಾಯಿತು.
ಪ್ಯಾಕ್ಸ್ ಸಿಲಿಕಾ ಎಂದರೇನು? – ಪ್ಯಾಕ್ಸ್ ಸಿಲಿಕಾ ಎಂಬುದು 2025 ರ ಡಿಸೆಂಬರ್‌ನಲ್ಲಿ ಅಮೆರಿಕದಿಂದ ಪ್ರಾರಂಭಿಸಲಾದ ಒಂದು ಕಾರ್ಯತಂತ್ರದ ಮೈತ್ರಿಕೂಟ. AI ಮತ್ತು ಸೆಮಿಕಂಡಕ್ಟರ್‌ಗಳ ಸರಬರಾಜು ಸರಪಳಿಯನ್ನ ಸುರಕ್ಷಿತವಾಗಿ, ನಂಬಿಕಾರ್ಹ ರಾಷ್ಟ್ರಗಳ ನಡುವೆ ರಕ್ಷಿಸುವುದು ಮತ್ತು ಚೀನಾ ಸೇರಿದಂತೆ ಅನ್ಯ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
ಇದು ಪ್ರಮುಖ ಖನಿಜಗಳಾದ ಲಿಥಿಯಂ, ಕೋಬಾಲ್ಟ್, ರೇರ್ ಅರ್ಥ್ ಎಲಿಮೆಂಟ್ಸ್, ಸೆಮಿಕಂಡಕ್ಟರ್ ಉತ್ಪಾದನೆ, AI ತಂತ್ರಜ್ಞಾನ ಮತ್ತು ಶಕ್ತಿ ಸಂಪನ್ಮೂಲಗಳಿಂದ ಹಿಡಿದು ಸಂಪೂರ್ಣ ತಂತ್ರಜ್ಞಾನ ಸರಪಳಿಯನ್ನ ಒಳಗೊಂಡಿದೆ. ಪ್ರಸ್ತುತ ಅಮೆರಿಕ, ಜಪಾನ್, ಬ್ರಿಟನ್, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಇಸ್ರೇಲ್, ಸಿಂಗಾಪೂರ್, ಗ್ರೀಸ್, ಖತಾರ್ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ಸದಸ್ಯ ರಾಷ್ಟ್ರಗಳಾಗಿವೆ.
ಈ ಮೈತ್ರಿಕೂಟಕ್ಕೆ ಸೇರ್ಪಡೆಯಿಂದ ಭಾರತಕ್ಕೆ ಹಲವು ಲಾಭಗಳಾಗಲಿದೆ. ಮುಖ್ಯವಾಗಿ, ಸೆಮಿಕಂಡಕ್ಟರ್ ತಯಾರಿ ಮತ್ತು AI ಕ್ಷೇತ್ರದಲ್ಲಿ ಸಹಕಾರ ಹೆಚ್ಚಾಗುತ್ತದೆ. ಭಾರತದ ಸೆಮಿಕಂಡಕ್ಟರ್ ಉದ್ಯಮಕ್ಕೆ ಹೊಸ ಹೂಡಿಕೆಗಳು ಮತ್ತು ತಂತ್ರಜ್ಞಾನ ವರ್ಗಾವಣೆ ಸಾಧ್ಯವಾಗುತ್ತದೆ. ಜಾಗತಿಕ AI ಆರ್ಥಿಕತೆಯಲ್ಲಿ ಭಾರತದ ಪಾತ್ರ ಬಲಗೊಳ್ಳುತ್ತದೆ ಮತ್ತು ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಹೆಚ್ಚಾಗುತ್ತದೆ. ಭವಿಷ್ಯದ ಆರ್ಥಿಕ ಬೆಳವಣಿಗೆಗೆ AI ಮತ್ತು ಸಿಲಿಕಾನ್ ಆಧಾರಿತ ತಂತ್ರಜ್ಞಾನಗಳು ಕೀಲಿಯಾಗಿರುವುದರಿಂದ ಇದು ಭಾರತದ ಆರ್ಥಿಕ ಸುರಕ್ಷತೆಗೂ ಸಹಾಯಕವಾಗುತ್ತದೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಪ್ರಪಂಚವು ಭಾರತವನ್ನ ನಂಬುತ್ತದೆ, ನಮ್ಮ ಬೃಹತ್ ಪ್ರತಿಭಾ ಸಂಪತ್ತು ಮತ್ತು ವಿದೇಶಾಂಗ ನೀತಿಯಿಂದ ಈ ನಂಬಿಕೆ ಉಂಟಾಗಿದೆ. ಪ್ಯಾಕ್ಸ್ ಸಿಲಿಕಾ ಸಹಿ ಸೆಮಿಕಂಡಕ್ಟರ್ ಸರಬರಾಜು ಸರಪಳಿ ಮತ್ತು ಉತ್ಪಾದನೆಗೆ ಮಹತ್ವದ್ದಾಗಿದೆ. ಈ ಒಪ್ಪಂದವು ಅಮೆರಿಕ-ಭಾರತ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಮತ್ತು 21 ನೇ ಶತಮಾನದ ತಂತ್ರಜ್ಞಾನ ಆರ್ಥಿಕತೆಯಲ್ಲಿ ಭಾರತವನ್ನ ಪ್ರಮುಖ ಆಟಗಾರನನ್ನಾಗಿ ಮಾಡುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದರು.















