ಹರಾರೆ (Harare): ಜಿಂಬಾಬ್ವೆ ಎದುರು ಏಕದಿನ ಕ್ರಿಕೆಟ್ ಸರಣಿಯನ್ನು ವೈಟ್‌ವಾಶ್ ಮಾಡುವ ಗುರಿ ಹೊಂದಿರುವ ಟೀಮ್ ಇಂಡಿಯಾ ಇಲ್ಲಿನ ಹರಾರೆ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 8 ವಿಕೆಟ್‌ಗೆ 289 ರನ್ ಗಳಿಸಿದೆ.
290 ರನ್ ಗಳ ಗುರಿ ಬೆನ್ನತ್ತಿರುವ ಜಿಂಬಾಬ್ವೆ ತಂಡ 30.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿ ಆಡುತ್ತಿದೆ. ಟಾಸ್ ಗೆದ್ದ ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ 84 ರನ್ ಗಳಿಸುವ ಹೊತ್ತಿಗೆ ತನ್ನ ಆರಂಭಿಕರನ್ನು ಕಳೆದುಕೊಂಡಿತು. ಓಪನರ್ ಗಳಾದ ಕೆ.ಎಲ್ ರಾಹುಲ್ (30) ಮತ್ತು ಶಿಖರ್ ಧವನ್ (40) ಸಿಕ್ಕ ಉತ್ತಮ ಆರಂಭವನ್ನು ಪರಿವರ್ತಿಸದೇ ಹೋದರು.
ಆರಂಭಿಕರ ಪತನದ ಬಳಿಕ ತಂಡಕ್ಕೆ ದೊಡ್ಡ ಮೊತ್ತ ತಂದುಕೊಡುವ ಜವಾಬ್ದಾರಿ ಹೊತ್ತ ಯುವ ಹಾಗೂ ಇನ್‌ಫಾರ್ಮ್ ಬ್ಯಾಟರ್ ಶುಭಮನ್ ಗಿಲ್, ಏಕದಿನ ಕ್ರಿಕೆಟ್ ವೃತ್ತಿಬದುಕಿನಲ್ಲಿ ಚೊಚ್ಚಲ ಶತಕ ಬಾರಿಸಿ ಸಂಭ್ರಮಿಸಿದರು. ವಿಂಡೀಸ್ ಪ್ರವಾಸದಲ್ಲಿ ಅಜೇಯ 98 ರನ್ ಗಳಿಸಿದ್ದ ಗಿಲ್, ಇದೀಗ ಜಿಂಬಾಬ್ವೆ ಎದುರು ಮೂರಂಕಿಯ ಸ್ಕೋರ್ ಮಾಡಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಶತಕದ ಖಾತೆ ತೆರೆದಿದ್ದಾರೆ.
ಗಿಲ್‌ಗೆ ಉತ್ತಮ ಸಾಥ್ ಕೊಟ್ಟ ಇಶಾನ್ ಕಿಶನ್, 3ನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು. 61 ಎಸೆತಗಳಲ್ಲಿ 50 ರನ್ ಗಳಿಸಿದ್ದ ಕಿಶನ್ ಇನ್ನೇನು ರನ್ ಗಳಿಕೆಯ ವೇಗ ಹೆಚ್ಚಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಅನಗತ್ಯ ರನ್ ಗಳಿಕೆಗೆ ಮುಂದಾಗಿ ರನ್‌ಔಟ್ ಆದರು. ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟರ್‌ಗಳು ಸ್ಲಾಗ್ ಓವರ್‌ಗಳಲ್ಲಿ ಅಷ್ಟೇನು ಸಿಡಿಯದೇ ಇದ್ದ ಕಾರಣ ಭಾರತ 300ರ ಗಡಿ ದಾಟದೇ ಹೋಯಿತು. ಅಂತಿಮವಾಗಿ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 289 ರನ್‌ಗಳನ್ನು ಪೇರಿಸಿತು.