ಎಜ್‌ಬಾಸ್ಟನ್ (Edgbaston) : ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಘಾತ ಎದುರಿಸಿರುವ ಟೀಮ್ ಇಂಡಿಯಾಕ್ಕೆ ವಿಕೆಟ್ ಕೀಪರ್, ಎಡಗೈ ಬ್ಯಾಟರ್ ರಿಷಭ್ ಪಂತ್ ಆಸರೆಯಾಗಿದ್ದಾರೆ.
ಪಂತ್ ಆಕರ್ಷಕ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ, ಮೊದಲ ದಿನದಾಟದ ಟೀ ವಿರಾಮದ ವೇಳೆಗೆ 44 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದೆ.
98 ರನ್ನಿಗೆ ಐದು ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ ಸಂಕಷ್ಟಕ್ಕೊಳಗಾಗಿತ್ತು. ಆದರೆ ಮುರಿಯದ ಐದನೇ ವಿಕೆಟ್‌ಗೆ 76 ರನ್‌ಗಳ ಜೊತೆಯಾಟ ಕಟ್ಟಿರುವ ಪಂತ್ ಹಾಗೂ ರವೀಂದ್ರ ಜಡೇಜಾ ತಂಡವನ್ನು ಮುನ್ನಡೆಸಿದರು.
52 ಎಸೆತಗಳನ್ನು ಎದುರಿಸಿರುವ ಪಂತ್, ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 53 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅವರಿಗೆ ತಕ್ಕ ಸಾಥ್ ನೀಡುತ್ತಿರುವ ಜಡೇಜಾ 65 ಎಸೆತಗಳಲ್ಲಿ 32 ರನ್ ಗಳಿಸಿ (4 ಬೌಂಡರಿ) ಕ್ರೀಸ್ ನಲ್ಲಿದ್ದಾರೆ.
ಈ ಮೊದಲು ಜೇಮ್ಸ್ ಆ್ಯಂಡ್ರೆಸನ್ (3 ವಿಕೆಟ್) ಹಾಗೂ ಮ್ಯಾಟಿ ಪಾಟ್ಸ್ (2 ವಿಕೆಟ್) ದಾಳಿಗೆ ಸಿಲುಕಿದ ಭಾರತ ಹಿನ್ನಡೆ ಅನುಭವಿಸಿತು.
ಶುಭಮನ್ ಗಿಲ್ (17), ಚೇತೇಶ್ವರ ಪೂಜಾರ (13), ಹನುಮ ವಿಹಾರಿ (20) ಹಾಗೂ ವಿರಾಟ್ ಕೊಹ್ಲಿ (11) ವೈಫಲ್ಯ ಅನುಭವಿಸಿದರು. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಈ ನಡುವೆ ಮಳೆಯಿಂದಾಗಿ ಪಂದ್ಯಕ್ಕೆ ಅಲ್ಪ ಹೊತ್ತು ಅಡಚಣೆ ಎದುರಾಗಿತ್ತು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಜಸ್‌ಪ್ರೀತ್ ಬೂಮ್ರಾ ಮುನ್ನಡೆಸುತ್ತಿದ್ದಾರೆ.