ಮನೆ ಕ್ರೀಡೆ ವಿಂಡೀಸ್‌ ವಿರುದ್ಧ ಭಾರತಕ್ಕೆ 119 ರನ್‌ ಗಳ ಭರ್ಜರಿ ಜಯ: ಸರಣಿ ಕ್ಲೀನ್‌ ಸ್ವೀಪ್‌

ವಿಂಡೀಸ್‌ ವಿರುದ್ಧ ಭಾರತಕ್ಕೆ 119 ರನ್‌ ಗಳ ಭರ್ಜರಿ ಜಯ: ಸರಣಿ ಕ್ಲೀನ್‌ ಸ್ವೀಪ್‌

0

ಟ್ರಿನಿಡಾಡ್ (Trinidad): ವೆಸ್ಟ್ ಇಂಡೀಸ್ ವಿರುದ್ಧದ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲೂ ಭಾರತ ತಂಡ 119 ರನ್ ಗಳ ಭರ್ಜರಿ ಗೆಲುವು ಸಾಧಿಸಿ, ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ನೀಡಿದ 226 ರನ್ ಗಳ ಗುರಿಯನ್ನು ಬೆನ್ನತ್ತಿದ ವಿಂಡೀಸ್ ತಂಡ 26 ಓವರ್ ಗಳಲ್ಲಿ ಕೇವಲ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಭಾರತ ತಂಡ 119 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ವಿಂಡೀಸ್‌ ತಂಡ ಆರಂಭಿಕ ಆಘಾತಕ್ಕೊಳಗಾಗಿದ್ದಲ್ಲದೆ, ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಬ್ರಾಂಡನ್ ಕಿಂಗ್ (42 ರನ್), ನಾಯಕ ಪೂರನ್ (42 ರನ್), ಶಾಯ್ ಹೋಪ್ (22) ಮತ್ತು ಹೇಡನ್ ವಾಲ್ಶ್ (10 ರನ್) ಬಿಟ್ಟರೆ ಉಳಿದ ಯಾವ ಬ್ಯಾಟರ್ ನಿಂದಲೂ ಎರಡಂಕಿ ಮೊತ್ತ ಬರಲಿಲ್ಲ. ವಿಂಡೀಸ್ ನಾಲ್ಕು ಬ್ಯಾಟರ್ ಗಳು ಶೂನ್ಯ ಸುತ್ತಿದ್ದರೆ, ಮೂರು ಮಂದಿ ಒಂದಂಕಿ ಮೊತ್ತಕ್ಕೆ ಔಟಾದರು. ಅಂತಿಮವಾದಿ ವಿಂಡೀಸ್ ತಂಡ 26 ಓವರ್ ಗಳಲ್ಲಿ ಕೇವಲ 137 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 119 ರನ್ ಗಳ ಅಂತರದಲ್ಲಿ ಭಾರತದ ಎದುರು ಹೀನಾಯ ಸೋಲು ಕಂಡಿತು. ಈ ಸೋಲಿನ ಮೂಲಕ ಭಾರತ ತಂಡ 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿ ಐತಿಹಾಸಿಕ ಸರಣಿ ಜಯ ಸಾಧಿಸಿದೆ.

ಇನ್ನು ಈ ಪಂದ್ಯದಲ್ಲಿ ಅಜೇಯ 98 ರನ್ ಗಳಿಸಿ ಚೊಚ್ಚಲ ಶತಕ ಮಿಸ್ ಮಾಡಿಕೊಂಡ ಭಾರತದ ಯುವ ಬ್ಯಾಟರ್ ಶುಭ್ ಮನ್ ಗಿಲ್ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.