ಬಾರ್ಬಡೋಸ್: ಬ್ರಿಡ್ಜ್ ಟೌನ್ ಓವೆಲ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಟೀಂ ಇಂಡಿಯಾ 5 ವಿಕೆಟ್ ಗಳಿಂದ ಗೆದ್ದಿದೆ. ಇಲ್ಲಿಯ ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ವಿಂಡೀಸ್ 114 ರನ್ ಗಳಿಗೆ ಸರ್ವಪತನ ಕಂಡಿತು.
ಇದಕ್ಕುತ್ತರವಾಗಿ ಭಾರತ 23 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 118 ರನ್ ಗಳಿಸಿ ಜಯಿಸಿತು. ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 1-0 ರಿಂದ ಮುನ್ನಡೆ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವಿಂಡೀಸ್ ಗೆ ಉತ್ತಮ ಆರಂಭ ಸಿಗಲಿಲ್ಲ. 45 ರನ್ ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಆರಂಭದ ಏಳು ಓವರ್ ಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ವೆಸ್ಟ್ ಇಂಡೀಸ್ ಆಟಗಾರರು ನಂತರ ಭಾರತದ ಸ್ಪಿನ್ನರ್ ಗಳ ದಾಳಿಗೆ ಸಿಲುಕಿ ನಲುಗಿದರು.
ಮುಕೇಶ್ ಕುಮಾರ್ ಅವರು ತಮ್ಮ ಕರಾರುವಾಕ್ ಬೌಲಿಂಗ್ ಮೂಲಕ ಅಥನ್ಜೆ (22), ಬ್ರಾಂಡನ್ ಕಿಂಗ್ (17) ಅವರ ವಿಕೆಟ್ ಪಡೆಯುವ ಮೂಲಕ ವೆಸ್ಟ್ ಇಂಡೀಸ್ ರನ್ ಬೇಟೆಗೆ ಕಡಿವಾಣ ಹಾಕಿದರು. ಶಾಹಿ ಹೋಪ್ ಮತ್ತು ಹೆಟ್ಮಾಯರ್ ಕೆಲಕಾಲ ಕ್ರೀಸ್ ನಲ್ಲಿ ಉತ್ತಮ ಇನ್ನಿಂಗ್ಸ್ ಕಟ್ಟಲು ಸಾಧ್ಯವಲಿಲ್ಲ ಜಡೇಜಾ ರವರ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಅವರೂ ಹೊರ ನಡೆದರು. ನಂತರ ವಿಂಡೀಸ್ ಒಂದರ ಹಿಂದೊಂದಂತೆ ವಿಕೆಟ್ ಕಳೆದುಕೊಳ್ಳುತ್ತಾ ಪೆವಿಲಿಯನ್ ಕಡೆಸಾಗಿತು. ಜಡೇಜಾ, ಕುಲ್ದೀಪ್ ಬಿಗು ಬೌಲಿಂಗ್ ದಾಳಿಗೆ ಸಿಲುಕಿದ ವಿಂಡೀಸ್ 26 ರನ್ ಗಳಲ್ಲಿ 7 ವಿಕೆಟ್ ಗಳನ್ನು ಕಳೆದುಕೊಂಡು ದಿಢೀರ್ ಅಲ್ಪಮೊತ್ತಕ್ಕೆ ಕುಸಿಯಿತು. ನಾಯಕ ಶೈ ಹೋಪ್ (45 ಎಸೆತಗಳಲ್ಲಿ 43; 4 ಬೌಂಡರಿ, 1 ಸಿಕ್ಸರ್) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ವಿಂಡೀಸ್ 23 ಓವರ್ ಗಳಲ್ಲಿ 114 ರನ್ ಗಳಿಸಲಷ್ಟೇ ಗಳಿಸಿತ್ತು.
ಈ ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದರು. ಶುಭಮನ್ ಗಿಲ್ (7) ಜೈಡೆನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು, ನಂತರ ಬಂದ ಸೂರ್ಯಕುಮಾರ್ ಯಾದವ್ ಸಹ 19 ರನ್ ಗಳಿಸಿ ಮೋತಿಗೆ ವಿಕೆಟ್ ನೀಡಿ ಪೆವಿಲಿಯನ್ ಸೇರಿದರು.
ಉಳಿದಂತೆ ಹಾರ್ದಿಕ್ ಪಾಂಡ್ಯ (5), ಶಾರ್ದೂಲ್ ಠಾಕೂರ್ (1), ರವೀಂದ್ರ ಜಡೇಜಾ (16 ಅಜೇಯ), ನಾಯಕ ರೋಹಿತ್ ಶರ್ಮಾ (12 ಅಜೇಯ) ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ 52 ರನ್ ಗಳಿಸಿದರು.
ಭಾರತ 23 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 118 ರನ್ ಗಳಿಸಿತ್ತು . ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 1-0 ರಿಂದ ಮುನ್ನಡೆ ಗಳಿಸಿದೆ.