ನವದೆಹಲಿ: ಹಿಟ್ ಮ್ಯಾನ್ ರೋಹಿತ್ ಶರ್ಮಾ ಬಿರುಗಾಳಿ ಶತಕ, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಭಾರತ ಪಾಯಿಂಟ್ ಪಟ್ಟಿಯಲ್ಲಿ ಸತತ ಎರಡು ಗೆಲುವಿನೊಂದಿಗೆ 2 ನೇ ಸ್ಥಾನ ಪಡೆಯಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಕಲೆಹಾಕಿತು.
273 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿತು. ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ನಡೆಸಿದರು. ಇಬ್ಬರೂ 18.4 ಓವರ್ ಗಳಲ್ಲಿ 156 ರನ್ ಸೇರಿಸಿದರು. ಈ ವೇಳೆ 47 ಎಸೆತಗಳಲ್ಲಿ 47 ರನ್ ಗಳಿಸಿದ್ದ ಇಶಾನ್, ರಶೀದ್ ಖಾನ್ ಎಸೆತದಲ್ಲಿ ಔಟಾದರು. ಅಬ್ಬರಿಸುತ್ತಿದ್ದ ರೋಹಿತ್ ಶರ್ಮಾ ಅಫ್ಘಾನ್ ಬೌಲರ್ ಗಳ ಬೆವರಿಳಿಸಿದರು. ಕೇವಲ 63 ಎಸೆತಗಳಲ್ಲಿ ಶತಕ ಪೂರೈಸಿದರು. ಅಂತಿಮವಾಗಿ ರೋಹಿತ್ 84 ಎಸೆತಗಳಲ್ಲಿ 131 ರನ್ ಗಳಿಸಿ ರಶೀದ್ ಖಾನ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಗೆ ಮರಳಿದರು.
ಬಳಿಕ ಬಂದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ 55 ರನ್ ಸಿಡಿಸಿ ವೃತ್ತಿ ಜೀವನದ 67ನೇ ಅರ್ಧಶತಕ ಬಾರಿಸಿದರು. ಶ್ರೇಯಸ್ ಅಯ್ಯರ್ 25 ರನ್ ಗಳಿಸಿ ಗೆಲುವಿನಲ್ಲಿ ಭಾಗಿಯಾದರು. ಹಿಟ್ ಮ್ಯಾನ್ ರೋಹಿತ್ ಶರ್ಮಾ ಬಿರುಗಾಳಿ ಶತಕ, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಟೀಂ ಇಂಡಿಯಾ 35 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.