ಪಾಲಕ್ಕಾಡ್: ಕೇರಳದ ಮಲಂಬುಳ ಪರ್ವತಗಳ ಕಡಿದಾದ ಬೆಟ್ಟದ ಬಂಡೆಕಲ್ಲಿನ ನಡುವೆ ಸಿಲುಕಿದ್ದ ಯುವಕನನ್ನು ಸತತ ಕಾರ್ಯಾಚರಣೆಯ ಬಳಿಕ ಭಾರತೀಯ ಸೇನೆಯು ಬುಧವಾರ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಮಲಂಬುಳದ 23 ವರ್ಷದ ಬಾಬು ಎಂಬ ಯುವಕ, ಸೋಮವಾರ (ಫೆ.8) ಮೂವರು ಸ್ನೇಹಿತರ ಜೊತೆಗೆ ಚಾರಣಕ್ಕೆ ತೆರಳಿದ್ದನು. ಬಳಿಕ ಕಾಲು ಜಾರಿ ಕಡಿದಾದ ಬೆಟ್ಟದ ನಡುವೆ ಸಿಲುಕಿದ್ದನು. ಸುಮಾರು 1,000 ಮೀಟರ್ ಎತ್ತರದ ಬೆಟ್ಟ ಇದಾಗಿದೆ. ಕಳೆದೆರಡು ದಿನಗಳಿಂದ ನೀರು, ಆಹಾರ ಇಲ್ಲದೆ ಸಂಕಷ್ಟಕ್ಕೊಳಗಾಗಿದ್ದನು.
ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುವ ಪ್ರಯತ್ನ ಪ್ರತಿಕೂಲ ಹವಾಮಾನದಿಂದಾಗಿ ವಿಫಲಗೊಂಡಿತ್ತು. ಅಲ್ಲದೆ ಡ್ರೋನ್ ಮೂಲಕ ಯುವಕನಿಗೆ ಆಹಾರ ತಲುಪಿಸುವ ಪ್ರಯತ್ನ ವಿಫಲಗೊಂಡಿತ್ತು.ಅಂತಿಮವಾಗಿ ಮಂಗಳವಾರ ರಾತ್ರಿ ಕೇರಳ ಸರ್ಕಾರದ ಮನವಿ ಮೇರೆಗೆ ಭಾರತೀಯ ಸೇನೆಯು ಯಶಸ್ವಿಯಾಗಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದೆ.
ಮಂಗಳವಾರ ರಾತ್ರಿ ಭಾರತೀಯ ಸೇನೆಯ ಎರಡು ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಿತ್ತು.ಮದ್ರಾಸ್ ರೆಜಿಮೆಂಟ್‌ನ 12 ಮಂದಿಯ ತಂಡದಲ್ಲಿ ಪರ್ವತಾರೋಹಿಗಳು ಸೇರಿದಂತೆ ನುರಿತ ಸಿಬ್ಬಂದಿಗಳು ಒಳಗೊಂಡಿದ್ದರು.
43 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿದ್ದ ಬಾಬು (23) ಅವರನ್ನು ಮರಳಿ ಕರೆತರುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಸೇನಾ ತಂಡ ಬಾಬುವಿನ ಕಡೆ ತಲುಪಿದ್ದುಅವರನ್ನು ನಿಧಾನವಾಗಿ ಮೇಲೆತ್ತಿದೆ. ರಾತ್ರಿಯೇ ಸ್ಥಳಕ್ಕಾಗಮಿಸಿದ ಸೇನಾ ತಂಡ ಬೆಟ್ಟದ ತುದಿ ತಲುಪಿ ಕೆಳಗೆ ಬಾಬು ಕುಳಿತಿದ್ದ ಜಾಗಕ್ಕೆ ಹಗ್ಗ ಬಿಗಿದಿತ್ತು. ಸೈನಿಕರು ಬಾಬು ಜೊತೆ ಮಾತನಾಡಿದ್ದಾರೆ. ಸುರಕ್ಷತಾ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸಿ ಬಾಬು ಅವರನ್ನು ಸೇನೆ ಮೇಲೆತ್ತಿದೆ. ಯುವಕನನ್ನು ರಕ್ಷಿಸಿದ ಬಳಿಕ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.