ನವದೆಹಲಿ(Newdelhi): ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕೋವಿಡ್–19 ದೃಢಪಟ್ಟಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ತಿಳಿಸಿವೆ.
ಈ ಕಾರಣದಿಂದಾಗಿ ರಾಹುಲ್ ದ್ರಾವಿಡ್ ದುಬೈಯಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿಗೆ ತಂಡದ ಜತೆ ತೆರಳುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಜಿಂಬಾಬ್ವೆ ವಿರುದ್ಧ ಸೋಮವಾರ ಕೊನೆಗೊಂಡ ಏಕದಿನ ಕ್ರಿಕೆಟ್ ಸರಣಿಗೂ ತಂಡದ ಜತೆ ದ್ರಾವಿಡ್ ಇರಲಿಲ್ಲ. ಸತತ ಪಂದ್ಯಗಳ ಕಾರಣ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಹಾಗೂ ಇತರ ಕೋಚಿಂಗ್ ಸಿಬ್ಬಂದಿಗೆ ಬಿಸಿಸಿಐ ವಿಶ್ರಾಂತಿ ನೀಡಿತ್ತು. ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು ಭಾರತ ಕ್ಲೀನ್ಸ್ವೀಪ್ ಮಾಡಿದೆ.
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 27ರಂದು ಆರಂಭಗೊಳ್ಳಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು 28ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ.














