ವಾಷಿಂಗ್ಟನ್: ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ ರಾಜಸ್ಥಾನ ಮೂಲದ ಡ್ರಗ್ಸ್ ಸ್ಮಗ್ಲರ್ ಸುನೀಲ್ ಯಾದವ್ ಕ್ಯಾಲಿಫೋರ್ನಿಯಾದ ಸ್ಟಾಕ್ ಟನ್ ಸಿಟಿಯಲ್ಲಿ ನಡೆದ ಶೂಟೌಟ್ ನಲ್ಲಿ ಹತ್ಯೆಯಾಗಿರುವುದಾಗಿ ವರದಿಯಾಗಿದೆ.
ಸುನೀಲ್ ಯಾದವ್ ಒಬ್ಬ ಕುಖ್ಯಾತ ಕಳ್ಳಸಾಗಣೆದಾರನಾಗಿದ್ದು, ಈತ ಪಾಕಿಸ್ತಾನದ ಮಾರ್ಗದ ಮೂಲಕ ಭಾರತಕ್ಕೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎಂದು ವರದಿ ವಿವರಿಸಿದೆ.
ಕೆಲವು ವರ್ಷಗಳ ಹಿಂದೆ 300 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ಸುನೀಲ್ ಯಾದವ್ ಹೆಸರು ಕೇಳಿಬಂದಿತ್ತು. ಏತನ್ಮಧ್ಯೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ನಿಕಟವರ್ತಿ ರೋಹಿತ್ ಗೋಡಾರಾ ಸುನೀಲ್ ಯಾದವ್ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ.
ನನ್ನ ಸಹೋದರ ಅಂಕಿತ್ ಭಾದುನನ್ನು ಎನ್ ಕೌಂಟರ್ ಮಾಡಲು ಯಾದವ್ ಪಂಜಾಬ್ ಪೊಲೀಸ್ ಜತೆ ಕೈಜೋಡಿಸಿದ್ದ. ಈ ಕಾರಣಕ್ಕಾಗಿ ನಾವು ಅವನ ಮೇಲೆ ಪ್ರತೀಕಾರ ತೀರಿಸಿಕೊಂಡಿದ್ದೇವೆ ಎಂದು ಗೋಡಾರ್ ತಿಳಿಸಿದ್ದಾನೆ.
ಎನ್ ಕೌಂಟರ್ ನಲ್ಲಿ ನನ್ನ ಸಹೋದರ ಸಾವನ್ನಪ್ಪಿದ್ದ ಘಟನೆಯಲ್ಲಿ ಯಾದವ್ ಹೆಸರು ಕೇಳಿಬಂದ ನಂತರ ಆತ ಭಾರತ ಬಿಟ್ಟು ಪರಾರಿಯಾಗಿದ್ದ. ಭದ್ರತಾ ಅಧಿಕಾರಿಗಳ ಮೂಲಗಳ ಪ್ರಕಾರ, ಎರಡು ವರ್ಷಗಳ ಹಿಂದೆ ಯಾದವ್ ರಾಹುಲ್ ಎಂಬ ನಕಲಿ ಹೆಸರಿನ ಪಾಸ್ ಪೋರ್ಟ್ ನಲ್ಲಿ ಅಮೆರಿಕಕ್ಕೆ ಪರಾರಿಯಾಗಿದ್ದ ಎಂದು ತಿಳಿಸಿದೆ.