ಮಾಸ್ಕೋ: ಭದ್ರತಾ ತೀವ್ರತೆ ಹೆಚ್ಚಾಗುತ್ತಿರುವ ಕಾಲದಲ್ಲಿ, ಭಾರತದ ಸಂಸದರ ನಿಯೋಗ ರಷ್ಯಾದ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿಯ ಭೀಕರ ಕ್ಷಣದಿಂದ ಪಾರಾದ ಘಟನೆ ವರದಿಯಾಗಿದೆ. ಡಿಎಂಕೆ ಸಂಸದೆ ಕನ್ನಿಮೋಳಿ ನೇತೃತ್ವದ ನಿಯೋಗವು ರಷ್ಯಾಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಭಾರತೀಯ ಸಂಸದರ ಈ ನಿಯೋಗವು ಆಪರೇಷನ್ ಸಿಂಧೂರ್ ಕುರಿತು ಜಾಗತಿಕವಾಗಿ ಮಾಹಿತಿ ನೀಡುವ ಹಾಗೂ ಪಾಕಿಸ್ತಾನದ ನಿಗೂಢ ಕಾರ್ಯವೈಖರಿಯನ್ನು ಬಯಲಿಗೆಳೆಯುವ ಉದ್ದೇಶದಿಂದ ವಿವಿಧ ರಾಷ್ಟ್ರಗಳಿಗೆ ತೆರಳುತ್ತಿದೆ. ಇದರ ಭಾಗವಾಗಿ ಒಂದು ನಿಯೋಗ ರಷ್ಯಾಕ್ಕೆ ತೆರಳಿದ್ದು, ಇದೇ ವೇಳೆ ಮಾಸ್ಕೋ ಏರ್‌ಪೋರ್ಟ್ ಬಳಿ ಡ್ರೋನ್ ದಾಳಿ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ.
ವಿಮಾನವು ಮಾಸ್ಕೋಗೆ ಸಮೀಪಿಸುತ್ತಿದ್ದಾಗ ಡ್ರೋನ್ ದಾಳಿ ಸಂಭವಿಸಿದ್ದು, ಈ ವಿಮಾನವು ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ಹಲವಾರು ಗಂಟೆಗಳ ಕಾಲ ಸುತ್ತುತ್ತಲೇ ಇತ್ತು. ಭದ್ರತಾ ಪರಿಸ್ಥಿತಿಗಳ ಮೌಲ್ಯಮಾಪನದ ನಂತರ, ವಿಮಾನವು ಅಂತಿಮವಾಗಿ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯಿತು. ರಷ್ಯಾದ ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.
ಈ ನಿಯೋಗದಲ್ಲಿ ಸಂಸದೆ ಕನ್ನಿಮೋಳಿ ಜೊತೆಗೆ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ, ಆರ್‌ಜೆಡಿ ನಾಯಕ ಪ್ರೇಮಚಂದ್ ಗುಪ್ತಾ, ಕ್ಯಾಪ್ಟನ್ ಬ್ರಿಜೇಶ್, ಅಶೋಕ್ ಕುಮಾರ್ ಮಿತ್ತಲ್, ಮತ್ತು ಹಿರಿಯ ರಾಯಭಾರಿ ಮಂಜೀವ್ ಸಿಂಗ್ ಪುರಿ ಇದ್ದರು. ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಸರ್ವಪಕ್ಷ ಸಂಸದರ ನಿಯೋಗವನ್ನು ಸ್ವಾಗತಿಸಿ ಸುರಕ್ಷಿತವಾಗಿ ಅವರ ಹೋಟೆಲ್‌ಗೆ ಕರೆದೊಯ್ದರು.
ರಷ್ಯಾ ಭೇಟಿಯನ್ನು ಪೂರ್ಣಗೊಳಿಸಿದ ನಂತರ, ನಿಯೋಗವು ಸ್ಲೊವೇನಿಯಾ, ಗ್ರೀಸ್, ಲಾಟ್ವಿಯಾ ಮತ್ತು ಸ್ಪೇನ್‌ಗೆ ಪ್ರಯಾಣಿಸಲಿದೆ. ಮಾಸ್ಕೋ ತಲುಪಿದ ನಂತರ, ಡಿಎಂಕೆ ಸಂಸದೆ ಕನ್ನಿಮೋಳಿ, ರಷ್ಯಾ ಭಾರತದ ಕಾರ್ಯತಂತ್ರದ ಪಾಲುದಾರ ಎಂದು ಹೇಳಿದರು.
ರಾಜತಾಂತ್ರಿಕ ವಿಷಯಗಳು, ವ್ಯಾಪಾರ ಇತ್ಯಾದಿಗಳಲ್ಲಿ ನಾವು ಯಾವಾಗಲೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಭಾರತದಲ್ಲಿ ನಾವು 26 ಜನರನ್ನು ಕಳೆದುಕೊಂಡೆವು, ಆದ್ದರಿಂದ ಭಾರತ ಸರ್ಕಾರ ಮತ್ತು ಪ್ರಧಾನಿ ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವು ಮತ್ತು ನಮ್ಮ ನಿಲುವನ್ನು ಜಗತ್ತಿಗೆ ಪ್ರಸ್ತುತಪಡಿಸಲು ದೇಶಾದ್ಯಂತ ವಿವಿಧ ಪಕ್ಷಗಳ ಸಂಸದರನ್ನು ಕಳುಹಿಸಲು ನಿರ್ಧರಿಸಿದರು.
ಭಾರತವನ್ನು ಪ್ರತಿನಿಧಿಸುವ ಡಿಎಂಕೆ ಸಂಸದರು, ನಾವು ಇಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳ ಸಮಿತಿಯ ಸದಸ್ಯರನ್ನು ಭೇಟಿ ಮಾಡುತ್ತೇವೆ ಎಂದು ಹೇಳಿದರು. ಭಾರತದಲ್ಲಿ ಏನಾಯಿತು ಮತ್ತು ಭಯೋತ್ಪಾದನೆಯ ವಿರುದ್ಧ ನಾವು ಹೇಗೆ ಒಟ್ಟಾಗಿ ಹೋರಾಡಬೇಕು ಎಂಬುದನ್ನು ನಾವು ಅವರಿಗೆ ವಿವರಿಸುತ್ತೇವೆ ಎಂದು ಹೇಳಿದ್ದಾರೆ.















