ಅಮೆರಿಕದ ನಾಸಾದಲ್ಲಿ ಉನ್ನತ ಅಧಿಕಾರಿಯಾಗಿದ್ದ ಭಾರತೀಯ ಮೂಲದ ನೀಲಾ ರಾಜೇಂದ್ರ ಅವರನ್ನು ವಜಾ ಮಾಡಲಾಗಿದೆ. ಅಧ್ಯಕ್ಷ ಟ್ರಂಪ್ ಅವರ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಾಸಾ ತಿಳಿಸಿದೆ.
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದಲ್ಲಿ ವಿಭಾಗವೊಂದರ ಮುಖ್ಯಸ್ಥರಾಗಿದ್ದ ಭಾರತೀಯ ಮೂಲದ ನೀಲಾ ರಾಜೇಂದ್ರ ಅವರನ್ನು ವಜಾ ಮಾಡಲಾಗಿದೆ. ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯು ತನ್ನ ಉನ್ನತ ವೈವಿಧ್ಯತೆ, ಸಮಾನತೆ ಮತ್ತು ಸೇರ್ಪಡೆ (DEI) ಅಧಿಕಾರಿ ನೀಲಾ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶ ಹಿನ್ನೆಲೆ ವಜಾಗೊಳಿಸಲಾಗಿದೆ ಎಂದು ನಾಸಾ ಸ್ಪಷ್ಟಪಡಿಸಿದೆ. ನಾಸಾ ಮಾರ್ಚ್‌ನಲ್ಲಿ ತನ್ನ ವೈವಿಧ್ಯತೆ ವಿಭಾಗವನ್ನು ಮುಚ್ಚಿದ ನಂತರ ನೀಲಾ ರಾಜೇಂದ್ರ ಅವರನ್ನು ಸಂಸ್ಥೆಯಲ್ಲಿ ಉಳಿಸಿಕೊಳ್ಳಲು ವಜಾಗೊಳಿಸುವುದನ್ನು ತಡೆಯಲು ತಂಡ ಶ್ರೇಷ್ಠ ಮತ್ತು ಉದ್ಯೋಗಿ ಯಶಸ್ಸಿನ ಕಚೇರಿಯ ಮುಖ್ಯಸ್ಥ’ ಎಂದು ಮರುನಾಮಕರಣ ಮಾಡಿ ಉಳಿಸಿಕೊಳ್ಳಲು ಯತ್ನಿಸಿತ್ತು. ಆದರೆ ಅವರನ್ನು ಉಳಿಸಿಕೊಳ್ಳುವ ಅಂತಿಮ ಹೋರಾಟ ವಿಫಲವಾದವು ಎಂದು ನಾಸಾ ಹೇಳಿದೆ.
ಈ ಬೆಳವಣಿಗೆಯ ನಂತರ ಕಾರ್ಯನಿರ್ವಾಹಕ ಶಾಖೆಯ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ನಿಷೇಧಿಸುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಕಠೋರ ಆದೇಶಗಳು ಈಗ ಚರ್ಚೆಗೆ ಕಾರಣವಾಗಿದೆ. ಟ್ರಂಪ್ ಇದು ಆಡಳಿತಕ್ಕೆ ಅನಗತ್ಯ ಹೊರೆ ಎಂದು ಸಮಜಾಯಿಕೆ ನೀಡಿದ್ದರು.
ಕಳೆದ ಸೋಮವಾರ, ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯು ಶ್ರೀಮತಿ ನೀಲಾ ರಾಜೇಂದ್ರ ಅವರನ್ನು ವಜಾಗೊಳಿಸಿದ ಬಗ್ಗೆ ಉನ್ನತ ಬಾಹ್ಯಾಕಾಶ ಪ್ರಯೋಗಾಲಯದ ಸಿಬ್ಬಂದಿಗೆ ಈ ಮೇಲ್ ಮೂಲಕ ತಿಳಿಸಿತ್ತು. ನೀಲಾ ರಾಜೇಂದ್ರ ಅವರು ಇನ್ನು ಮುಂದೆ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯಲ್ಲಿ ಕೆಲಸ ಮಾಡುತ್ತಿಲ್ಲ. ನಮ್ಮ ಸಂಸ್ಥೆಗೆ ಅವರು ನೀಡಿರುವ ಕೊಡುಗೆ, ಶಾಶ್ವತ ಪರಿಹಾರಗಳು, ನಾವು ಕೊನೆವರೆಗೂ ಕೃತಜ್ಞರಾಗಿರುತ್ತೇವೆ. ಅವರಿಗೆ ಭವಿಷ್ಯಕ್ಕೆ ಶುಭ ಹಾರೈಕೆಗಳು ಎಂದು ಕಳಿಸಿತ್ತು.
ಕಳೆದ ವರ್ಷ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬ್ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ನಲುಗಿತ್ತು. ಆಗ ಹಲವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಆದರೆ ತೆಗೆದುಹಾಕದ ಕೆಲವೇ ಸಿಬ್ಬಂದಿಗಳಲ್ಲಿ ನೀಲಾ ರಾಜೇಂದ್ರ ಕೂಡ ಒಬ್ಬರಾಗಿದ್ದರು. ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಬಾಹ್ಯಾಕಾಶ ಸಂಸ್ಥೆಯಲ್ಲಿ 900 ಕ್ಕೂ ಹೆಚ್ಚು ಹೆಚ್ಚುವರಿ DEI ಕಾರ್ಮಿಕರು ತಮ್ಮ ಉದ್ಯೋಗದಿಂದ ವಜಾಗೊಂಡಿದ್ದರು.
ಈ ವರ್ಷದ ಮಾರ್ಚ್‌ನಲ್ಲಿ ಅಧ್ಯಕ್ಷ ಟ್ರಂಪ್ ಅವರ ಹೊಸ ಆದೇಶದ ಬಳಿಕ ನಾಸಾ ತನ್ನ ಡಿಇಐ ವಿಭಾಗವನ್ನು ಮುಚ್ಚಿತು. ಹೀಗಾಗಿ ನೀಲಾ ಅವರನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಅವರ ಹುದ್ದೆಯನ್ನು ಬದಲಿಸಿ, ನೀಲಾ ಅವರಿಗಾಗಿಯೇ ಹೊಸ ವಿಭಾಗವನ್ನು ತೆರೆದು ಸ್ಥಾನ ಕೊಡಲಾಗಿತ್ತು. ಆದರೆ ಅಂತಿಮವಾಗಿ ಟ್ರಂಪ್ ಆದೇಶವನ್ನು ಪಾಲೀಸಲೇಬೇಕಿತ್ತು. ಹೀಗಾಗಿ ನೀಲಾ ಅವರಿಗೆ ವಿದಾಯ ಹೇಳಲಾಗುತ್ತಿದೆ.
ಹಲವು ವರ್ಷಗಳಿಂದ ನೀಲಾ ರಾಜೇಂದ್ರ ನಾಸಾದಲ್ಲಿ ಹಿರಿಯ ಹುದ್ದೆಯನ್ನು ಅಲಂಕರಿಸಿದ್ದರು. ಅವರು ಅಲ್ಲಿದ್ದಾಗ ಹಲವು ಉನ್ನತ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ನಾಸಾದಲ್ಲಿ ವೈವಿಧ್ಯತೆಯನ್ನು ತರಲು ‘ಸ್ಪೇಸ್ ವರ್ಕ್‌ಫೋರ್ಸ್ 2030’ ಎಂಬ ಭವಿಷ್ಯದ ಭರವಸೆಯ ಯೋಜನೆ ಜಾರಿಗೆ ತಂದಿದ್ದರು. ಈ ಯೋಜನೆಯು ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ನೇಮಿಸಿಕೊಳ್ಳುವುದು ಅವರ ಪ್ರಮುಖ ಗುರಿಯಾಗಿತ್ತು.
ತನ್ನ ವೈವಿಧ್ಯತೆ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಇತರ ಫೆಡರಲ್ ಸರ್ಕಾರಿ ಸಂಸ್ಥೆಗಳ ಸಾಲಿಗೆ ಈಗ ನಾಸಾ ಸೇರಿದೆ.
ಡೊನಾಲ್ಡ್ ಟ್ರಂಪ್ ಅವರ ಆದೇಶದ ಪ್ರಕಾರ, ಈ ರೀತಿಯ ಕಾರ್ಯಕ್ರಮಗಳು ಅಮೆರಿಕನ್ನರನ್ನು ಜನಾಂಗ, ಬಣ್ಣ ಮತ್ತು ಲಿಂಗದ ಆಧಾರದ ಮೇಲೆ ತಾರತಮ್ಯಕ್ಕೆ ನಾಂದಿ ಹಾಡುತ್ತದೆ. ಈ ಯೋಜನೆಗಳು ಸರ್ಕಾರಿ ಸಂಪನ್ಮೂಲಗಳನ್ನು ಹಾಳುಮಾಡಿವೆ ಮತ್ತು ಲಿಂಗ, ಜನಾಂಗೀಯತೆ ಮತ್ತು ಬಣ್ಣದ ಆಧಾರದ ಮೇಲೆ ಅಮೆರಿಕನ್ನರನ್ನು ಬೇರ್ಪಡಿಸಿವೆ ಎಂಬುದಾಗಿದೆ.