ಘಾಜಿಪುರ/ ಲಖನೌ: ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ಚಿನ್ಹಾಟ್ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಲಖನೌ ಮತ್ತು ಗಾಜಿಪುರ ಪೊಲೀಸರು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸೋವಿಂದ್ ಕುಮಾರ್ (26) ಹಾಗೂ ಸನ್ನಿ ದಯಾಳ್ (28) ಮೃತರು.
ಕಿಸಾನ್ ಪಥದ ಬಳಿ ಲಖನೌ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಸೋವಿಂದ್ ಹತನಾಗಿದ್ದರೆ, ಗಾಜಿಪುರ ಪೊಲೀಸರು ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಸನ್ನಿ ಮೃತಪಟ್ಟಿದ್ದಾನೆ ಎಂದು ಅವರು ಹೇಳಿದ್ದಾರೆ.
ಬಿಹಾರ ಮೂಲದ ಸೋವಿಂದ್ ಕುಮಾರ್ ಬ್ಯಾಂಕ್ ದರೋಡೆಯಲ್ಲಿ ಬೇಕಾಗಿರುವ ಶಂಕಿತ ಆರೋಪಿಗಳಲ್ಲಿ ಒಬ್ಬ ಎಂದು ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ರಾಧಾ ರಮಣ್ ಸಿಂಗ್ ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ, ಚಿನ್ಹಾಟ್ ಪ್ರದೇಶದ ಲೌಲೈ ಗ್ರಾಮದ ಬಳಿ ಸಂಚರಿಸುತ್ತಿದ್ದ ಎರಡು ವಾಹನಗಳನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಶಂಕಿತರಲ್ಲಿ ಒಬ್ಬ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಸೋವಿಂದ್ ಕುಮಾರ್ ಗುಂಡೇಟಿನಿಂದ ಮೃತಪಟ್ಟಿದ್ದಾನೆ ಎಂದು ಅವರು ಹೇಳಿದ್ದಾರೆ.
ಇನ್ನು ಮತ್ತೊಬ್ಬ ಆರೋಪಿ ಸನ್ನಿ ದಯಾಳ್ ತಲೆಗೆ ₹25,000 ಬಹುಮಾನ ಘೋಷಿಸಲಾಗಿತ್ತು. ಗಾಜಿಪುರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಬಾರಾ ಪೊಲೀಸ್ ಔಟ್‌ಪೋಸ್ಟ್ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಸನ್ನಿ ದಯಾಳ್ ಮೃತಪಟ್ಟಿದ್ದಾನೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಗಳಿಂದ 32 ಪಿಸ್ತೂಲ್, ₹35,500 ನಗದು ಹಾಗೂ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ
ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಚಿನ್ಹಾಟ್ ಶಾಖೆಯಲ್ಲಿ ಭಾನುವಾರ ದರೋಡೆ ನಡೆದಿತ್ತು. ಗೋಡೆಯನ್ನು ಕೊರೆದು ಬ್ಯಾಂಕ್‌ಗೆ ಪ್ರವೇಶಿಸಿದ ದರೋಡೆಕೋರರು ಸುಮಾರು 40 ಲಾಕರ್‌ಗಳಲ್ಲಿದ್ದ ವಸ್ತುಗಳನ್ನು ದೋಚಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್, ಸಂದೀಪ್ ಸಿಂಗ್ ದೂರು ನೀಡಿದ್ದರು.
ದರೋಡೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಸೋಮವಾರ ಮುಂಜಾನೆ ಮೂವರನ್ನು ಪೊಲೀಸರು ಬಂಧಿಸಿದ್ದರು. ಬಿಹಾರ ನಿವಾಸಿಗಳಾದ ಅರವಿಂದ್ ಕುಮಾರ್, ಬಲರಾಮ್ ಹಾಗೂ ಕೈಲಾಶ್ ಬಂಧಿತರು.
ಇನ್ನು ಸೋಬಿಂದ್ ಕುಮಾರ್, ಸನ್ನಿ ದಯಾಳ್, ಮಿಥುನ್ ಕುಮಾರ್ ಮತ್ತು ವಿಪಿನ್ ಕುಮಾರ್ ವರ್ಮಾ ಎಂಬುವವರು ತಪ್ಪಿಸಿಕೊಂಡಿದ್ದರು.