ಮುಂಬೈ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ62.6 ಕೋಟಿ ರೂ. ಮೌಲ್ಯದ ಕೊಕೇನ್ ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಓರ್ವ ಭಾರತೀಯ ಮಹಿಳೆಯನ್ನು ಬಂಧಿಸಿದ್ದಾರೆ.
ಜು.14ರಂದು ಬಂಧಿತ ಮಹಿಳೆ ದೋಹಾದಿಂದ ಮುಂಬೈ ಬಂದಿಳಿದಿದ್ದರು. ಈ ವೇಳೆ ಗುಪ್ತಚರ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು (DRI) ಪರಿಶೀಲನೆ ನಡೆಸಿದಾಗ 6 ಬಿಸ್ಕಟ್ ಬಾಕ್ಸ್ ಹಾಗೂ ಮೂರು ಚಾಕೋಲೇಟ್ ಬಾಕ್ಸ್‌ಗಳು ಪತ್ತೆಯಾಗಿವೆ. ಈ 9 ಬಾಕ್ಸ್‌ಗಳಲ್ಲಿ ಕೊಕೇನ್ ಎಂದು ಹೇಳಲಾದ ಬಿಳಿ ಪುಡಿಯ ವಸ್ತು ತುಂಬಿದ ಕ್ಯಾಪ್ಸುಲ್‌ಗಳ ಪತ್ತೆಯಾಗಿವೆ.
ಪತ್ತೆಯಾದ ವಸ್ತುವನ್ನು ಸ್ಥಳದಲ್ಲಿಯೇ ಕಿಟ್‌ಗಳನ್ನು ಬಳಸಿ ಪರೀಕ್ಷೆಗೊಳಪಡಿಸಿದಾಗ ಕೊಕೇನ್ ಎಂದು ದೃಢಪಟ್ಟಿದೆ. ಈ ಮೂಲಕ ಸುಮಾರು 62.6 ಕೋಟಿ ರೂ. ಮೌಲ್ಯದ 6,261 ಗ್ರಾಂ ಕೊಕೇನ್ ಇರುವ 300 ಕ್ಯಾಪ್ಸುಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ 1985ರ ಮಾದಕ ದ್ರವ್ಯಗಳು ಕಾಯ್ದೆಯಡಿ ಮಹಿಳೆಯನ್ನು ಬಂಧಿಸಿ, ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಇದಕ್ಕೂ ಮುನ್ನ ಜುಲೈ 8ರಂದು, ಡಿಆರ್‌ಐ ಅಧಿಕಾರಿಗಳು ತಿರುಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 12 ಕೋಟಿ ರೂ. ಮೌಲ್ಯದ ಉನ್ನತ ದರ್ಜೆಯ ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಿದ್ದರು. ಪರಿಶೀಲನೆ ವೇಳೆ ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾದ 28 ಮಾದಕ ವಸ್ತುಗಳ ಬ್ಯಾಗ್‌ನ್ನು ವಶಪಡಿಸಿಕೊಂಡಿದ್ದರು.














