ಬೆಂಗಳೂರು : ಇಂಡಿಗೋ ವಿಮಾನಗಳ ಅವಾಂತರದಿಂದ ಬೆಂಗಳೂರಿನ ಪಂಚತಾರಾ ಹೋಟೆಲ್‌ಗಳ ದರ ಶೇ.40 ರಿಂದ 60ರಷ್ಟು ಏರಿಕೆಯಾಗಿದೆ. ಕಳೆದ ಒಂದು ವಾರದಿಂದ ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟ ರದ್ದು ಹಾಗೂ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಜೊತೆಗೆ ಇನ್ನೂ ಕೆಲ ಸಮಯ ಇಂಡಿಗೋ ವಿಮಾನಗಳ ಹಾರಾಟ ಮರಳಿ ಮೊದಲಿನ ಸ್ಥಿತಿಗೆ ಬರುವುದು ಅನುಮಾನವಾಗಿದೆ. ಹೀಗಾಗಿ ಪರ್ಯಾಯ ಫ್ಲೈಟ್‌ಗಾಗಿ ಕಾಯುತ್ತಿರುವ ಪ್ರವಾಸಿಗರು ಸ್ಥಳೀಯ ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದು, ಸ್ಟಾರ್ ಹೋಟೆಲ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಬಹುತೇಕ ಎಲ್ಲಾ ಪಂಚತಾರಾ ಹೋಟೆಲ್‌ಗಳು ಕಳೆದು ನಾಲ್ಕೈದು ದಿನಗಳಿಂದ ಒಂದು ದಿನದ ದರವನ್ನು ಬರೋಬ್ಬರಿ ಶೇ.40ರಿಂದ 60ರಷ್ಟಕ್ಕೆ ಏರಿಕೆ ಮಾಡಿದ್ದಾರೆ. ಒಂದು ದಿನಕ್ಕೆ ಸಾಮಾನ್ಯವಾಗಿ 10-15 ಸಾವಿರ ರೂ. ತೆಗೆದುಕೊಳ್ಳುತ್ತಿದ್ದ ಹೋಟೆಲ್‌ಗಳು ಇದೀಗ 40 ರಿಂದ 50 ಸಾವಿರ ರೂ.ಗೆ ಏರಿಕೆ ಮಾಡಿವೆ. ಹೀಗಾಗಿ ಪ್ರವಾಸಿಗರಿಗೆ ದರ ಏರಿಕೆ ಬಿಸಿ ತಟ್ಟಿದೆ.
ಈ ಕುರಿತು ಬೆಂಗಳೂರು ಹೋಟೆಲ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಮಾತನಾಡಿ, ಬೇಡಿಕೆ ಹೆಚ್ಚಾದಾಗ ದರ ಏರಿಕೆ ಸಾಮಾನ್ಯ ವಿಚಾರವಾಗಿದೆ. ಹೊಸ ವರ್ಷ, ಕ್ರಿಕೆಟ್ ಮ್ಯಾಚ್ ದಿನಗಳಲ್ಲಿ ಏರಿಕೆ ಆಗೇ ಆಗುತ್ತೆ. ಈಗ ಇಂಡಿಗೋ ಫ್ಲೈಟ್ ಸಮಸ್ಯೆ ಆಗಿರುವುದರಿಂದ ಪ್ರವಾಸಿಗರು ಹೋಟೆಲ್ ಸೇರುತ್ತಿದ್ದಾರೆ.
ಆದರೆ ಈ ಬಾರಿ ಟೂರಿಸ್ಟ್ ವ್ಯವಹಾರಕ್ಕೆ ಬಹಳ ಹೊಡೆತ ಬಿದ್ದಿದೆ. ಹೀಗಾಗಿ ಈ ಸಮಸ್ಯೆ ಬಗೆಹರಿಯುವವರೆಗೆ ಬೇಡಿಕೆ ಇದೇ ರೀತಿ ಇರಬಹುದು. ರೂಮ್ ರೆಂಟ್‌ನಲ್ಲಿ ಸಣ್ಣಪುಟ್ಟ ಬದಲಾವಣೆ ಆಗೇ ಆಗುತ್ತದೆ ಎಂದು ತಿಳಿಸಿದ್ದಾರೆ.














