ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಮಂಗಳೂರು ಮತ್ತು ಮೈಸೂರಿಗೆ ಸಂಪರ್ಕ ಒದಗಿಸುವ ವಿಮಾನ ಸೇವೆ ಆರಂಭವಾಗಲಿದೆ.
ವಿಮಾನಸೇವೆ ಆರಂಭಿಸಲು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿಯವರು ಇಂಡಿಗೋ ವಿಮಾನಯಾನ ಸಂಸ್ಥೆಗೆ ಮನವಿ ಮಾಡಿದ್ದರು. ಸಚಿವರ ಮನವಿಗೆ ಸ್ಪಂದಿಸಿದ ಇಂಡಿಗೋ ಸಂಸ್ಥೆ ಇದೇ ಮೇ 1ರಿಂದ ವಾರದಲ್ಲಿ 4 ದಿನ ಮಂಗಳೂರಿಗೆ ಮತ್ತು ಮೇ 3ರಿಂದ ವಾರದಲ್ಲಿ 3 ದಿನ ಮೈಸೂರಿಗೆ ವಿಮಾನ ಹಾರಾಟ ಪ್ರಾರಂಭಿಸಲಿದೆ.
ಕೇಂದ್ರ ಸರ್ಕಾರ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಸುಸಜ್ಜಿತ ನಿಲ್ದಾಣವನ್ನಾಗಿ ಮಾರ್ಪಡಿಸಿದೆ. ಹುಬ್ಬಳ್ಳಿಯಿಂದ ಮೈಸೂರು, ಮಂಗಳೂರು ನಗರಗಳಿಗೆ ವಿಮಾನ ಯಾನ ಸೇವೆ ಅವಶ್ಯಕತೆ ಇತ್ತು. ಬಹುದಿನ ಬೇಡಿಕೆಗೆ ಇಂದು ಚಾಲನೆ ನೀಡಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇಂಡಿಗೋ ಏಪ್ರಿಲ್ 27 ರಿಂದ ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ ದೈನಂದಿನ ವಿಮಾನ ಕಾರ್ಯಾಚರಣೆ ಘೋಷಿಸಿದೆ. ವಿಮಾನವು ಹುಬ್ಬಳ್ಳಿಯಿಂದ ಬೆಳಿಗ್ಗೆ 8 ಗಂಟೆಗೆ ಹೊರಟು 9.10 ಕ್ಕೆ ಹೈದರಾಬಾದ್‌ಗೆ ತಲುಪಲಿದೆ. ಮತ್ತು ಹೈದರಾಬಾದ್‌ನಿಂದ ಬೆಳಗ್ಗೆ 9.40ಕ್ಕೆ ಹೊರಟು 11 ಗಂಟೆಗೆ ಹುಬ್ಬಳ್ಳಿಗೆ ಬರಲಿದೆ.
ಹುಬ್ಬಳ್ಳಿಯ ನಗರದಿಂದ ಅತ್ಯಂತ ಜನಪ್ರಿಯ ಸೇವೆಗಳಲ್ಲಿ ಒಂದಾದ ಅಹಮದಾಬಾದ್‌ಗೆ ವಿಮಾನ ಸಂಚಾರ ಪುನರಾರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ. ಇಂಡಿಗೋ ಈ ಮಾರ್ಗದಲ್ಲಿ ಏರ್‌ಬಸ್ ಸಂಚಾರ ನಿರ್ವಹಿಸುತ್ತಿತ್ತು, ಆದರೆ ಸಾಂಕ್ರಾಮಿಕ ಸಮಯದಲ್ಲಿ ಅದನ್ನು ಸ್ಥಗಿತಗೊಳಿಸಲಾಯಿತು.