ಮನೆ ಕಾನೂನು ದೇಶದ ಸಮಗ್ರತೆಗೆ ಧಕ್ಕೆಯಾದರೆ ವ್ಯಕ್ತಿ ಸ್ವಾತಂತ್ರಕ್ಕೆ ಮನ್ನಣೆ ನೀಡಲಾಗದು: ಹೈಕೋರ್ಟ್

ದೇಶದ ಸಮಗ್ರತೆಗೆ ಧಕ್ಕೆಯಾದರೆ ವ್ಯಕ್ತಿ ಸ್ವಾತಂತ್ರಕ್ಕೆ ಮನ್ನಣೆ ನೀಡಲಾಗದು: ಹೈಕೋರ್ಟ್

0

ಬೆಂಗಳೂರು: ದೇಶಕ್ಕಿಂತಲೂ ವ್ಯಕ್ತಿ ದೊಡ್ಡವನಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ರಾಷ್ಟ್ರದ ಸಾರ್ವಭೌಮತೆ, ಏಕತೆ ಹಾಗೂ ಸಮಗ್ರತೆಯ ಹಿತಾಸಕ್ತಿಗೆ ಸವಾಲು ಎದುರಾದ ಸಂದರ್ಭದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಲಾಗದು ಎಂದು ತಿಳಿಸಿದೆ.

Join Our Whatsapp Group

ಇಸ್ಲಾಮಿಕ್​ ಸ್ಟೇಟ್ (ಐಸಿಸ್​) ಸಂಘಟನೆಯಲ್ಲಿ ಸದಸ್ಯ ಎಂಬ ಆರೋಪದಲ್ಲಿ ಬಂಧಿತನಾಗಿರುವ ಅರಫತ್​ ಎಂಬವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್​ ಹರೀಶ್​ ಕುಮಾರ್​ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಸಂವಿಧಾನದ 21ನೇ ವಿಧಿ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದಾಗಿದೆ. ಕಾನೂನಿನ ಸರಿಯಾದ ಪ್ರಕ್ರಿಯೆಯಿಲ್ಲದೆ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಅವಕಾಶವಿಲ್ಲ. ಆದರೆ ರಾಷ್ಟ್ರೀಯ ಹಿತಾಸಕ್ತಿ ಒಳಗೊಂಡಾಗ ಅಥವಾ ರಾಷ್ಟ್ರದ ಏಕತೆ, ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಸವಾಲನ್ನು ಒಡ್ಡಿದಾಗ, ವೈಯಕ್ತಿಕ ಸ್ವಾತಂತ್ರ್ಯದ ಮನ್ನಣೆ ಕಳೆದುಕೊಳ್ಳುತ್ತದೆ ಎಂದು ಪೀಠ ತಿಳಿಸಿದೆ.

ಸೂಕ್ತ ಕಾನೂನಿನ ಅಡಿಯಲ್ಲಿ ನಿಯಮಗಳನ್ನು ಪಾಲಿಸದೆ, ಬಂಧಿಸಿದ ಸಂದರ್ಭದಲ್ಲಿ ಸಂವಿಧಾನದ ಅನುಚ್ಛೇದ 21ರ ಅಡಿಯಲ್ಲಿ ಸ್ವಾತಂತ್ರ್ಯ ಹಕ್ಕು ಪಡೆಯಲು ಹೋರಾಡಬಹುದಾಗಿದೆ. ಆದರೆ, ಅಪರಾಧದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಲ್ಲಿ ಅದನ್ನು ಕಾನೂನಿನ ಅಡಿಯಲ್ಲಿ ಪರಿಗಣಿಸಬೇಕಾಗಿದ್ದು, ಈ ಸಂದರ್ಭದಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣರದಲ್ಲಿ ಸಾಕ್ಷಿಯಾಗಿರುವ ಮತ್ತೊಬ್ಬ ಆರೋಪಿ, ಮ್ಯಾಜಿಸ್ಟ್ರೇಟ್​ ನ್ಯಾಯಾಲಯದ ಮುಂದೆ, ಮೇಲ್ಮನವಿ ಅರ್ಜಿದಾರನಿಂದ ಪ್ರಭಾವಕ್ಕೊಳಗಾಗಿದ್ದೇನೆ. ಅವರು ಭಾರತದಲ್ಲಿ ಐಸಿಸಿ ಸಿದ್ಧಾಂತಗಳನ್ನು ಜಾರಿ ಮಾಡುವುದಕ್ಕಾಗಿ ಪ್ರಯತ್ನ ಮಾಡಿದ್ದಾರೆ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಮೇಲ್ಮನವಿ ಅರ್ಜಿದಾರರ ವಿರುದ್ಧದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದಲ್ಲಿ ಅವರ ವಿರುದ್ಧದ ಆರೋಪಗಳು ಸಾಬೀತುಪಡಿಸುತ್ತವೆ. ಹೀಗಾಗಿ, ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ ಸೆಕ್ಷನ್​ 43ಡಿ ಅಡಿಯಲ್ಲಿ ಪ್ರಕರಣ ದಾಖಲಿಸುವುದಕ್ಕೆ ಅವಕಾಶವಿದೆ ಎಂದು ತಿಳಿಸಿರುವ ಪೀಠ, ಜಾಮೀನು ನೀಡಲು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಶಿವಮೊಗ್ಗ ನಗರದಲ್ಲಿ ಪ್ರೇಮಸಿಂಗ್​ ಎಂಬ ಯುವಕನಿಗೆ ಚಾಕು ಇರಿದ ಘಟನೆ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ್ದ ಕೇಂದ್ರ ಸರ್ಕಾರ 2022ರ ನವೆಂಬರ್​ 14ರಂದು ತನಿಖೆಯನ್ನು ರಾಷ್ಟ್ರೀಯ ತನಿಖಾ ಏಜೆನ್ಸಿಗೆ (ಎನ್​ಐಎ) ವಹಿಸಿತ್ತು. ವಿಚಾರಣೆ ಸಂದರ್ಭದಲ್ಲಿ ಮೇಲ್ಮನವಿ ಅರ್ಜಿದಾರನ (10ನೇ ಆರೋಪಿ) ಯುವ ಸಮೂಹವನ್ನು ಉಗ್ರಗಾಮಿಗಳನ್ನಾಗಿ ಮಾಡಿದ ಮತ್ತು ಇಸ್ಲಾಮಿಕ್​ ಸ್ಟೇಟ್ (ಐಸಿಸ್​) ಸಂಘಟನೆ ಉತ್ತೇಜನ ನೀಡಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಆದರೆ, ವಿದೇಶದಲ್ಲಿದ್ದ ಕಾರಣದಿಂದ ಬಂಧಿಸಲಾಗಿರಲಿಲ್ಲ.

ಬಳಿಕ 2023ರ ಸೆಪ್ಟಂಬರ್​ 14ರಂದು ಎನ್​ಐಎ ಮೇಲ್ಮನವಿದಾರರನ್ನು ಬಂಧಿಸಿ ತನಿಖೆ ಕೈಗೊಂಡಿದ್ದು, ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ(ತಡೆ) ಮತ್ತು ಐಪಿಸಿಯ ಅಡಿಯ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿತ್ತು. ಈ ನಡುವೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ 2024ರ ಫೆಬ್ರುವರಿಯಲ್ಲಿ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.