ಪಿರಿಯಾಪಟ್ಟಣ: ಪ್ರವಾಸಿಗರಿಗೆ ದೇಶ ಪ್ರೇಮದ ಅರಿವು ಮೂಡಿಸುವ ಉದ್ದೇಶದಿಂದ ಕೂರ್ಗ್ ವಾಟರ್ ಪಾರ್ಕ್ ಆವರಣದಲ್ಲಿ ಭಾರತೀಯ ಸೇನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚಿತ್ರ ಸಮೇತ ಮಾಹಿತಿ ನೀಡಲಾಗುತ್ತಿದೆ ಎಂದು ಕೂರ್ಗ ವಾಟರ್ ಪಾರ್ಕ್ ಮಾಲೀಕ ಲಕ್ಷ್ಮೀ ನಾರಾಯಣ್ (ನಾಣಿ) ಹೇಳಿದರು.
ತಾಲೂಕಿನ ಕುಂದನಹಳ್ಳಿ ಬಳಿಯ ಕೂರ್ಗ್ ವಾಟರ್ ಪಾರ್ಕ್ ಆವರಣದಲ್ಲಿ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಕುಶಾಲನಗರದ ಲಯನ್ಸ್ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲ್ಯದಿಂದಲೂ ಭಾರತೀಯ ಸೇನೆ ಹಾಗೂ ಸೈನಿಕರ ಬಗ್ಗೆ ಅಪಾರ ಗೌರವವಿದೆ. ಈ ನಿಟ್ಟಿನಲ್ಲಿ ವಾಟರ್ ಪಾರ್ಕ್ ಆವರಣದಲ್ಲಿ ಕಾರ್ಗಿಲ್ ವಿಜಯೋತ್ಸವ, ಪರಮ ವೀರ ಚಕ್ರ ಪಡೆದವರು ಹಾಗೂ ಸೇನಾ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರ ಪ್ರತಿಮೆ ಸ್ಥಾಪಿಸಿ ಪ್ರವಾಸಿಗರಿಗೆ ಮೋಜಿನ ಜತೆ ದೇಶ ಪ್ರೇಮದ ಅರಿವು ಮೂಡಿಸಲಾಗುತ್ತಿದೆ ಎಂದರು.
ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುಮನ್ ಬಾಲಚಂದ್ರ ಅವರು ಮಾತನಾಡಿ, ದೇಶ ರಕ್ಷಣೆಗೆ ಹಗಲಿರುಳೆನ್ನದೆ ಸದಾ ನಮ್ಮನ್ನು ಕಾಯುತ್ತಿರುವ ಸೈನಿಕರನ್ನು ಪ್ರತಿಯೊಬ್ಬರು ಗೌರವಿಸಬೇಕಿದೆ, ಯುದ್ಧದ ಸಂದರ್ಭ ಶತ್ರು ರಾಷ್ಟ್ರಗಳನ್ನು ಮೆಟ್ಟಿ ದೇಶದ ಹಿರಿಮೆ ಸಾರುವ ಸೈನಿಕರಿಂದಾಗಿ ನಾವೆಲ್ಲರೂ ಭದ್ರತೆಯಿಂದ ಜೀವಿಸುವಂತಾಗಿದೆ, ಸೇನೆ ಹಾಗೂ ಸೈನಿಕರ ಬಗ್ಗೆ ವಿಶೇಷವಾಗಿ ಮಾಹಿತಿ ನೀಡುತ್ತಿರುವ ಲಕ್ಷ್ಮೀನಾರಾಯಣ್ (ನಾಣಿ) ಅವರ ಕಾರ್ಯ ಇತರರಿಗೆ ಮಾದರಿಯಾಗಲಿ ಎಂದರು.
ನಿವೃತ್ತ ಸೈನಿಕ ಚಿನ್ನಪ್ಪ ಅವರು ದೇಶದ ಗಡಿಯಲ್ಲಿ ಸೈನಿಕರ ಕರ್ತವ್ಯ ಹಾಗೂ ಯುದ್ಧ ಸಂದರ್ಭ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಲಯನ್ಸ್ ಕ್ಲಬ್ ಕಾರ್ಯದರ್ಶಿ ಟಿ.ಕೆ ರಾಜಶೇಖರ್, ಖಜಾಂಚಿ ನಿತಿನ್ ಗುಪ್ತ, ವಲಯ ಅಧ್ಯಕ್ಷ ಸತೀಶ್ ಕುಮಾರ್, ಮಾಜಿ ಅಧ್ಯಕ್ಷ ಕೊಡಗನ ಹರ್ಷ, ನಿರ್ದೇಶಕರಾದ ಕವಿತಾ ಮೋಹನ್, ಸರೋಜಾ, ಅನಿತಾ, ಚಿತ್ರಲೇಖ, ರಮ್ಯಾ, ಡಾ.ಪ್ರವೀಣ್, ಡಾ. ಮ್ಯಾತ್ಯು ಹಾಗೂ ಕೂರ್ಗ ವಾಟರ್ ಪಾರ್ಕ್ ಸಿಬ್ಬಂದಿ ಇದ್ದರು.