ಮನೆ ರಾಜಕೀಯ ಪ್ರವಾಸಿ ಸ್ಥಳಗಳಲ್ಲಿ ಪಂಚಾಯತ್ ಗಳಿಂದ ಮೂಲಸೌಕರ್ಯ: ಸಚಿವ ಪ್ರಿಯಾಂಕ್ ಖರ್ಗೆ

ಪ್ರವಾಸಿ ಸ್ಥಳಗಳಲ್ಲಿ ಪಂಚಾಯತ್ ಗಳಿಂದ ಮೂಲಸೌಕರ್ಯ: ಸಚಿವ ಪ್ರಿಯಾಂಕ್ ಖರ್ಗೆ

0

ದಕ್ಷಿಣ ಕನ್ನಡ: ಪ್ರವಾಸಿಗರು ಅಧಿಕ ಭೇಟಿ ನೀಡುವ ಸ್ಥಳಗಳಲ್ಲಿ ಗ್ರಾಮ ಪಂಚಾಯತ್ ಗಳಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಣ್ಣ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿದರೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಗ್ರಾಮದಲ್ಲಿ ಆರ್ಥಿಕ ಚಟುವಟಿಕೆಗಳು ಉತ್ತಮಗೊಳ್ಳಲಿವೆ. ಇದರಿಂದ ಗ್ರಾಮ ಪಂಚಾಯತ್ ಗಳಿಗೂ ಆದಾಯ ಬರಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳ ಹಾಗೂ ಪ್ರವಾಸಿ ತಾಣಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ಹಾಗೂ ಕರ ಸಂಗ್ರಹದಲ್ಲಿ ಪ್ರಸಕ್ತ ಸಾಲಿನ ಸಾಧನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ನಿಗದಿತ ಅವಧಿಯಲ್ಲಿ ತೆರಿಗೆ ಪಾವತಿಸಲು ಕ್ರಮ ಕೈಗೊಳ್ಳಬೇಕು. ವರ್ಷಾಂತ್ಯದವರೆಗೂ ವಿಳಂಭಿಸುವುದು ಸೂಕ್ತವಲ್ಲ ಎಂದು ಹೇಳಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯ ಆಸ್ತಿಗಳ ಮ್ಯಾನುವೆಲ್ ಸಮೀಕ್ಷೆ ಯಲ್ಲಿಯೂ ಸಾಧನೆ ಉತ್ತಮವಾಗಿಲ್ಲ. ಆಸ್ತಿಗಳ ಸಮೀಕ್ಷೆ ಪೂರ್ಣಗೊಂಡರೆ ಗ್ರಾ.ಪಂ. ಆದಾಯ ಹೆಚ್ಚಳಗೊಳ್ಳಲಿದೆ ಎಂದು ಸಚಿವರು ಹೇಳಿದರು.

ಗ್ರಾ.ಪಂ. ಗ್ರಂಥಾಲಯ ಗಳಲ್ಲಿ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸಂಪರ್ಕ, ಡಿಜಿಟಲ್ ಉಪಕರಣಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಒದಗಿಸುವ ಮೂಲಕ ಸಶಕ್ತಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಇದು ಜಾರಿಗೆ ಬರಲಿದೆ. ಗ್ರಂಥಾಲಯಗಳ ಪರಿಣಾಮಕಾರಿ ಬಳಕೆಗೆ ಮುತುವರ್ಜಿ ವಹಿಸುವಂತೆ ಅವರು ತಿಳಿಸಿದರು.
ಸಾರ್ವಜನಿಕರು ನೀಡುವ ಲಿಖಿತ ದೂರು, ಮನವಿಗಳನ್ನು, ಕಾಲಮಿತಿಯಲ್ಲಿ ಪರಿಹರಿಸಬೇಕು. 3 ತಿಂಗಳೊಳಗೆ ಇಂತಹ ದೂರುಗಳನ್ನು ಇತ್ಯರ್ಥ ಪಡಿಸದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಸಿದರು.
ತಾಲೂಕು ಪಂಚಾಯತ್ ಅಧಿಕಾರಿಗಳು ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ಬಗ್ಗೆ ಜಿ.ಪಂ. ಸಿಇಓ ಅವರು ವೇಳಾಪಟ್ಟಿ ರಚಿಸುವಂತೆ ಸಚಿವರು ಸೂಚಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ್ ಭಂಢಾರಿ, ಪಂಚಾಯತ್ ರಾಜ್ ಅಯುಕ್ತರಾದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತ ಪವನ್ ಕುಮಾರ್ ಮಾಲಪತಿ, ಗ್ರಾಮೀಣ ಕುಡಿಯುವ ನೀರು ಇಲಾಖೆ ನಿರ್ದೇಶಕ ನಾಗೇಂದ್ರ ಪ್ರಸಾದ್, ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಉಪಸ್ಥಿತರಿದ್ದರು.