ಮನೆ ಕಾನೂನು ಎಲ್ ಇಡಿ ದೀಪ ಅಳವಡಿಕೆ: ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

ಎಲ್ ಇಡಿ ದೀಪ ಅಳವಡಿಕೆ: ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್

0

ಕಲಬುರಗಿ: ವಾಹನಗಳಿಗೆ ಅತೀ ಪ್ರಕಾಶಮಾನ ಕಣ್ಣು ಕುಕ್ಕುವ (ಎಲ್ ಇಡಿ) ದೀಪ ಅಳವಡಿಕೆ ವಿರುದ್ಧ ಜಾರಿಗೆ ತಂದಿರುವ ಹೊಸ ಕಾಯ್ದೆ ಅಡಿ ಕಳೆದ ಮೂರು ದಿನಗಳಲ್ಲಿ 3,700 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ಹಾಗೂ ತರಬೇತಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ ತಿಳಿಸಿದರು.

Join Our Whatsapp Group

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 1ರಿಂದ ಹೊಸ ಕಾಯ್ದೆ ಜಾರಿಗೆ ಬಂದಿದ್ದು, ಮೂರು ದಿನಗಳಲ್ಲಿ ರಾಜ್ಯದಾದ್ಯಂತ 3,700 ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ. ಕಣ್ಣು ಕುಕ್ಕುವ ದೀಪ ಅಳವಡಿಕೆಯಿಂದ ಅಪಘಾತ ಜತೆಗೆ ಹಲವರಿಗೆ ತೊಂದರೆ ಆಗುತ್ತಿರುವುದನ್ನು ಕಂಡು ಇದನ್ನು ಅಳವಡಿಸಿದ ವಾಹನಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರಿಂದ ಕಾರ್ಯಾಚರಣೆ ಮೂಲಕ ಇಷ್ಟೊಂದು ಪ್ರಕರಣ ಪತ್ತೆ ಹಚ್ಚಲಾಗಿದೆ ಎಂದು ವಿವರಣೆ ನೀಡಿದರು.

ಜುಲೈ 1ರಂದು 1188, 2ರಂದು 996 ಹಾಗೂ 3 ರಂದು 1518 ಪ್ರಕರಣ ದಾಖಲಾಗಿವೆ. ಪ್ರಥಮ ದಿನದಂದು ಬೆಂಗಳೂರಿನಲ್ಲಿ 311, ಮೈಸೂರಲ್ಲಿ ಜಿಲ್ಲೆಯಲ್ಲಿ 96, ತುಮಕೂರದಲ್ಲಿ 70, ಚಾಮರಾಜ ನಗರದಲ್ಲಿ 48, ಕೊಡಗುದಲ್ಲಿ 36, ಕಾರವಾರದಲ್ಲಿ 93, ವಿಜಯಪುರದಲ್ಲಿ 96, ಧಾರವಾಡದಲ್ಲಿ 50, ಬಾಗಲಕೋಟ ಜಿಲ್ಲೆಯಲ್ಲಿ 47 ಪ್ರಕರಣ ದಾಖಲಿಸಿ ಕ್ರಮ‌ ಕೈಗೊಳ್ಳಲಾಗಿದೆ. ಒಟ್ಟಾರೆ ಹೆಚ್ಚುತ್ತಿರುವ ಅಪರಾಧ ಕಡಿಮೆಗೊಳಿಸುವ ಇರಾದೆ ಹೊಂದಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ತಿಳಿಸಿದರು.

ಅದೇ ರೀತಿ ಜುಲೈ 1ರಿಂದ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ (ಬಿಎನ್ ಎಸ್) ಕಾನೂನು ಕುರಿತಾಗಿ ಎಲ್ಲ ಸಿಬ್ಬಂದಿಗೆ ಮಾಹಿತಿಯ ತರಬೇತಿ ನೀಡಲಾಗಿದೆ.‌ ಸಂಘಟಿತ ಅಪರಾಧ ತಡಗೆ ಈಗಾಗಲೇ ರಾಜ್ಯದಲ್ಲಿ ಕೋಕಾ ಕಾಯ್ದೆ ಇದೆ. ಅದೇ ರೀತಿ ಹೊಸದಾಗಿ ಯುಎಪಿ 113 ಜಾರಿಗೆ ಬಂದಿದೆ. ಯಾವುದರಡಿ ಈಗ ಪ್ರಕರಣ ದಾಖಲಿಸಿಕೊಳ್ಳಬೇಕು ಎಂಬ ಗೊಂದಲ ಕೆಲ ಕಾಲ ಇರುತ್ತದೆ.‌ ಹೊಸ ಕಾಯ್ದೆಗಳು ಹಿಂದಿನಕ್ಕೂ ಸಾಮ್ಯತೆಯಿದ್ದರೂ ಹಲವಾರು ಬದಲಾವಣೆಗಳಿವೆ ಎಂದು ಎಡಿಜಿಪಿ ಅಲೋಕಕುಮಾರ ಹೇಳಿದರು.