ಮನೆ ಕಾನೂನು ಸಿದ್ದರಾಮಯ್ಯ ಭೇಟಿ ವೇಳೆ ನಗರಸಭಾ ಅಧ್ಯಕ್ಷರಿಗೆ ಅವಮಾನ: ಕಾಂಗ್ರೆಸ್ ನಾಯಕರ ವಿರುದ್ದದ ಎಫ್ಐಆರ್’ಗೆ ಹೈಕೋರ್ಟ್...

ಸಿದ್ದರಾಮಯ್ಯ ಭೇಟಿ ವೇಳೆ ನಗರಸಭಾ ಅಧ್ಯಕ್ಷರಿಗೆ ಅವಮಾನ: ಕಾಂಗ್ರೆಸ್ ನಾಯಕರ ವಿರುದ್ದದ ಎಫ್ಐಆರ್’ಗೆ ಹೈಕೋರ್ಟ್ ತಡೆ

0

ಸಾರ್ವಜನಿಕ ಶೌಚಾಲಯಗಳ ಪರಿಶೀಲನೆಗೆ ಮುಂದಾಗಿದ್ದ ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರನ್ನು ಅಕ್ರಮವಾಗಿ ತಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ ಆರೋಪದ ಸಂಬಂಧ ಕಾಂಗ್ರೆಸ್’ನ 13 ಮುಖಂಡರ ವಿರುದ್ಧ ಮಡಿಕೇರಿ ಟೌನ್ ಠಾಣಾ ಪೊಲೀಸರು ದಾಖಲಿಸಿದ್ದ ಎಫ್ಐಆರ್’ಗೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತಡೆಯಾಜ್ಞೆ ನೀಡಿದೆ. ಮಳೆಹಾನಿ ಪ್ರದೇಶಗಳ ಪರಿಶೀಲನೆಗಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ಈ ಘಟನೆ ನಡೆದಿತ್ತು ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಮಡಿಕೇರಿ ಟೌನ್ ಪೋಲೀಸರು ದಾಖಲಿಸಿರುವ ಎಫ್ಐಆರ್ ಹಾಗೂ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಚಂದ್ರಶೇಖರ್, ಎ ಎಸ್ ಪೊನ್ನಣ್ಣ ಸೇರಿದಂತೆ ಕಾಂಗ್ರೆಸ್ನ 13 ಸ್ಥಳೀಯ ನಾಯಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿದಾರರ ವಿರುದ್ಧದ ಎಫ್ಐಆರ್ ಮತ್ತು ಮಡಿಕೇರಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿನ ವಿಚಾರಣೆಗೆ ಬುಧವಾರ ತಡೆ ನೀಡಿತು.

ಮಡಿಕೇರಿ ನಗರ ಠಾಣಾ ಪೊಲೀಸರು ಮತ್ತು ದೂರುದಾರರಾದ ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿದ ನ್ಯಾಯಾಲಯವು ನಗರಸಭೆಯ ಎಷ್ಟು ಶೌಚಾಲಯ ಪರಿಶೀಲನೆ ನಡೆಸಲಾಗಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆಗೆ ಅಫಿಡವಿಟ್ ಸಲ್ಲಿಸುವಂತೆ ದೂರುದಾರರಿಗೆ ನಿರ್ದೇಶನ ನೀಡಿತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎ ಎಸ್ ಪೊನ್ನಣ್ಣ ವಾದಿಸಿದರು.

ಪ್ರಕರಣದ ಹಿನ್ನೆಲೆ: ನಗರಸಭೆ ಉಪಾಧ್ಯಕ್ಷರು, ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರು ಜೊತೆಗೂಡಿ ಕಳೆದ ಆಗಸ್ಟ್ 18ರಂದು ಮಡಿಕೇರಿ ನಗರದ ಮೂರ್ನಾಡು ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯ ಪರಿಶೀಲಿಸಲು ತೆರಳುತ್ತಿದ್ದಾಗ ಜಿ ಟಿ ವೃತ್ತದ ಬಳಿ ಪೊಲೀಸರು ತಡೆದು ಮುಂದಕ್ಕೆ ತೆರಳದಂತೆ ಸೂಚಿಸಿದ್ದರು. ಕಾರಣ ಕೇಳಿದ್ದಕ್ಕೆ ಈ ರಸ್ತೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬರುತ್ತಿರುವ ಕಾರಣ ಸಂಚಾರ ತಡೆಹಿಡಿಯಲಾಗಿದೆ ಎಂದಿದ್ದರು. ಅದೇ ಸಂದರ್ಭದಲ್ಲಿ ಮಂಗಳೂರು ರಸ್ತೆಯಿಂದ ಜಿ ಟಿ ವೃತ್ತದ ಕಡೆಗೆ ಮೆರವಣಿಗೆಯಲ್ಲಿ ಬಂದ ಅರ್ಜಿದಾರರು ತಮ್ಮನ್ನು ಕಂಡು ಅಕ್ರಮ ಕೂಟ ಕಟ್ಟಿಕೊಂಡು ಬಂದು ಹಲ್ಲೆ ಯತ್ನ ನಡೆಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದರು ಎಂದು ಆರೋಪಿಸಿ ಆಗಸ್ಟ್ 19ರಂದು ದೂರು ನೀಡಿದ್ದರು.

ಇದನ್ನು ಆಧರಿಸಿ, ಅರ್ಜಿದಾರರ ವಿರುದ್ಧ ಮಡಿಕೇರಿ ನಗರ ಪೊಲೀಸರು ಅಕ್ರಮವಾಗಿ ಗುಂಪುಗೂಡಿದ, ಅವಮಾನ ಮಾಡಿದ, ಗಲಭೆ ನಡೆಸಿದ ಆರೋಪದ ಸಂಬಂಧ ಎಫ್ಐಆರ್ ದಾಖಲಿಸಿದ್ದರು. ಪ್ರಕರಣವು ಮಡಿಕೇರಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

ಎಫ್ಐಆರ್ ಹಾಗೂ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿರುವ ಅರ್ಜಿದಾರರು, “ದೂರುದಾರರನ್ನು ತಾವು ತಡೆದಿಲ್ಲ. ಅವರನ್ನು ಪೊಲೀಸರೇ ತಡೆದರು. ನಾವೆಲ್ಲ ಮಳೆ ಹಾನಿ ಪ್ರದೇಶದ ಪರೀಶೀಲನೆ ನಡೆಸುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆಗಿದ್ದೆವು. ಅವರ ಜೊತೆಗಿದ್ದರೆ ಅಕ್ರಮ ಗುಂಪು ಸೇರಿದ ಅರ್ಥವಲ್ಲ. ಪ್ರವಾಸದ ವೇಳೆ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದವರ ವಿರುದ್ಧ ದೂರು ದಾಖಲಿಸಿದಕ್ಕೆ ಪ್ರತಿಯಾಗಿ ತಮ್ಮನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಲು ಉದ್ದೇಶಿಸಿದ್ದಾರೆ. ರಾಜಕೀಯ ಪ್ರೇರಿತವಾಗಿ ಮತ್ತು ದುರುದ್ದೇಶದಿಂದ ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ಅನ್ನು ರದ್ದುಪಡಿಸಬೇಕು” ಎನ್ನುವುದು ಅರ್ಜಿದಾರರ ಕೋರಿಕೆಯಾಗಿದೆ.