ಮನೆ ಕಾನೂನು ಅಂತರ್ಧರ್ಮೀಯ ಜೋಡಿ ಮತಾಂತರವಿಲ್ಲದೆ ಮದುವೆಯಾಗಲು ವಿಶೇಷ ವಿವಾಹ ಕಾಯಿದೆಯಡಿ ಅನುಮತಿ ಇದೆ: ಅಲಾಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಜೋಡಿ ಮತಾಂತರವಿಲ್ಲದೆ ಮದುವೆಯಾಗಲು ವಿಶೇಷ ವಿವಾಹ ಕಾಯಿದೆಯಡಿ ಅನುಮತಿ ಇದೆ: ಅಲಾಹಾಬಾದ್ ಹೈಕೋರ್ಟ್

0

ವಿವಾಹದ ಉದ್ದೇಶಕ್ಕಾಗಿ ತಮ್ಮ ಧರ್ಮವನ್ನು ಬದಲಾಯಿಸಲು ಬಯಸದ ಅಂತರ್ಧರ್ಮೀಯ ಜೋಡಿಗಳು ತಮ್ಮ ಮದುವೆಯನ್ನು ವಿಶೇಷ ವಿವಾಹ ಕಾಯಿದೆಯಡಿ ನೋಂದಾಯಿಸಿಕೊಳ್ಳಬಹುದು ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

Join Our Whatsapp Group

ತಮ್ಮ ಸಂಬಂಧದ ಸ್ವರೂಪದಿಂದಾಗಿ ತಮ್ಮ ಜೀವ ಮತ್ತು ಸ್ವಾತಂತ್ರ್ಯಕ್ಕೆ ಬೆದರಿಕೆ ಉಂಟಾಗಿದ್ದ ಸಹ ಜೀವನ ಸಂಗಾತಿಗಳಿಗೆ (ಲಿವ್‌-ಇನ್‌ ಜೋಡಿ) ರಕ್ಷಣೆ ನೀಡುವಾಗ ನ್ಯಾ. ಜ್ಯೋತ್ಸ್ನಾ ಶರ್ಮಾ ಈ ವಿಚಾರ ತಿಳಿಸಿದ್ದಾರೆ.

ಮನವಿ ವಿರೋಧಿಸಿದ ಉತ್ತರ ಪ್ರದೇಶ ಸರ್ಕಾರ ಈ ಜೋಡಿ ಒಪ್ಪಂದದ ಪ್ರಕಾರ ಈಗಾಗಲೇ ಮದುವೆಯಾಗಿರುವುದಾಗಿ ಮನವಿಯಲ್ಲಿ ತಿಳಿಸಿದ್ದು ಅಂತಹ ಮದುವೆಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲದಿರುವುದಿಂದ ರಕ್ಷಣೆ ನೀಡಲಾಗದು ಎಂದಿತು.

ಆದರೆ ಈ ವಾದ ತಿರಸ್ಕರಿಸಿದ ನ್ಯಾಯಾಲಯ “ವೈಯಕ್ತಿಕ ಒಪ್ಪಂದದ ಮೂಲಕ ನಡೆಯುವ ವಿವಾಹ ಕಾನೂನಿನಲ್ಲಿ ಖಂಡಿತವಾಗಿಯೂ ಅಮಾನ್ಯವಾದುದು. ಆದರೆ ಮತಾಂತರವಿಲ್ಲದೆ ವಿಶೇಷ ವಿವಾಹ ಕಾಯಿದೆಯಡಿ ಮದುವೆಯಾಗಲು ಕಾನೂನು ಅಡ್ಡಿ ಉಂಟುಮಾಡುವುದಿಲ್ಲ” ಎಂದು ತಿಳಿಸಿತು.

ತಮ್ಮ ಧರ್ಮವನ್ನು ಬದಲಾಯಿಸಲು ಬಯಸದ ಕಾರಣ ವಿಶೇಷ ವಿವಾಹ ಕಾಯಿದೆಯಡಿ ಮದುವೆಯಾಗಲು ನಿರ್ಧರಿಸಿದ್ದೇವೆ ಎಂದು ದಂಪತಿಗಳು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು. ರಕ್ಷಣೆ ನೀಡದೆ ಹೋದರೆ ಮದುವೆ ನೋಂದಣಿ ಮಾಡಿಕೊಳ್ಳಲಾಗದು ಎಂದು ವಾದಿಸಲಾಗಿತ್ತು.

ತಮ್ಮದೇ ಧರ್ಮ ಪಾಲಿಸುವುದಾಗಿ ಮತ್ತು ಮತಾಂತರಗೊಳ್ಳದೇ ಇರಲು ಜೋಡಿ ಬಯಸಿದ್ದು  ತಮ್ಮ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಷ್ಟು ಪ್ರಬುದ್ಧರಾಗಿರುವುದಾಗಿ ಪೂರಕ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೆ ಕಾನೂನಿನ ಪ್ರಕಾರ ವೈವಾಹಿಕ ಸಂಬಂಧಕ್ಕೆ ಮುಂದಾಗಲು ಗಂಭೀರವಾಗಿ ಅವರು ಬಯಸಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಅಂತೆಯೇ ಜೋಡಿಗೆ ರಕ್ಷಣೆ ನೀಡುವಂತೆ ನಿರ್ದೇಶಿಸಿದ ನ್ಯಾಯಾಲಯ ಶಾಸ್ತ್ರೋಕ್ತವಾಗಿ ವಿವಾಹ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಪ್ರಕರಣದ ಮುಂದಿನ ವಿಚಾರಣೆ ಜುಲೈ 10 ರಂದು ನಡೆಯಲಿದೆ. ಅಷ್ಟರೊಳಗೆ ವಿಶೇಷ ವಿವಾಹ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ತಮ್ಮ ವಿವಾಹಕ್ಕೆ ಮುಂದಾಗಬೇಕು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆ ಹಾಗೂ ಪೂರಕ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನ್ಯಾಯಾಲಯ ಜೋಡಿಗೆ ಸೂಚಿಸಿತು.

ಮಧ್ಯಪ್ರದೇಶ ಹೈಕೋರ್ಟ್‌ ಅಂತರ್ಧರ್ಮೀಯ ವಿವಾಹವೊಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇತ್ತೀಚೆಗೆ ಮೇಲಿನ ತೀರ್ಪಿಗೆ ವಿರುದ್ಧವಾದ ನಿಲುವನ್ನು ತೆಗೆದುಕೊಂಡಿತ್ತು. ವಿಶೇಷ ವಿವಾಹ ಕಾಯಿದೆಯನ್ವಯ ಹಿಂದೂ- ಮುಸ್ಲಿಂ ವಿವಾಹ ಮುಸ್ಲಿಂ ಕಾನೂನಿನಡಿ ಮಾನ್ಯವಲ್ಲ ಎಂದು ಅದು ಹೇಳಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ವಿವಾಹ ಕಾಯಿದೆಯಡಿ ತಾವು ಮದುವೆಯಾಗಲು ಮತ್ತು ವಿವಾಹ ನೋಂದಣಿ ಮಾಡಿಕೊಳ್ಳಲು ಪೊಲೀಸ್ ರಕ್ಷಣೆ ಬೇಕು ಎಂದು ಕೋರಿ ಅಂತರ್ಧರ್ಮೀಯ ಜೋಡಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.