ಮನೆ ಕಾನೂನು ಕೌಟುಂಬಿಕ ಹಿಂಸೆಯಿಂದ ಜೀವಚ್ಛವವಾಗಿರುವ ಪತ್ನಿಗೆ ಮಧ್ಯಂತರ ಜೀವನಾಂಶ ಕಡಿತ: ಆದೇಶ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್

ಕೌಟುಂಬಿಕ ಹಿಂಸೆಯಿಂದ ಜೀವಚ್ಛವವಾಗಿರುವ ಪತ್ನಿಗೆ ಮಧ್ಯಂತರ ಜೀವನಾಂಶ ಕಡಿತ: ಆದೇಶ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್

0

ಕೌಟುಂಬಿಕ ದೌರ್ಜನ್ಯಕ್ಕೊಳಗಾಗಿ ಜೀವಚ್ಛವ ಸ್ಥಿತಿ ತಲುಪಿರುವ ಹೆಂಡತಿಗೆ ಪತಿ ನೀಡಬೇಕಿದ್ದ ಜೀವನಾಂಶದ ಮೊತ್ತ ಕಡಿತಗೊಳಿಸಿದ್ದ ಮೇಲ್ಮನವಿ (ಸೆಷನ್ಸ್‌) ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್‌ ಈಚೆಗೆ ರದ್ದುಗೊಳಿಸಿದೆ.

Join Our Whatsapp Group

ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯಿದೆಯಡಿಯಲ್ಲಿ ಪತ್ನಿ ಪರವಾಗಿ ಆಕೆಯ ಕುಟುಂಬಸ್ಥರು ಹೂಡಿದ್ದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮಧ್ಯಂತರ ಜೀವನಾಂಶವಾಗಿ ತಿಂಗಳಿಗೆ ₹ 1.2 ಲಕ್ಷ ಪಾವತಿಸುವಂತೆ ವಿಚಾರಣಾ ನ್ಯಾಯಾಲಯ ಈ ಹಿಂದೆ ಪತಿಗೆ ಆದೇಶಿಸಿತ್ತು.

ಆದರೆ ಜೀವನಾಂಶ ನೀಡಬೇಕೆಂಬ ಆದೇಶವನ್ನು ಸಂಪೂರ್ಣ ರದ್ದಗೊಳಿಸದ ಸೆಷನ್ಸ್‌ ನ್ಯಾಯಾಲಯ ಈ ಮೊತ್ತವನ್ನು ತಿಂಗಳಿಗೆ ₹ 25,000ಕ್ಕೆ ಇಳಿಸಿತ್ತು.

ತನಗೆ ಜೀವನಾಂಶ ಕಡಿತಗೊಳಿಸಿರುವುದನ್ನು ಪತ್ನಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಾದ ಆಲಿಸಿದ ಹೈಕೋರ್ಟ್‌ ನ್ಯಾಯಮೂರ್ತಿ ಶರ್ಮಿಳಾ ದೇಶಮುಖ್ ಅವರು ಮೇಲ್ಮನವಿ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದ್ದು , ಪತ್ನಿಗೆ ಮಧ್ಯಂತರ ಜೀವನಾಂಶವಾಗಿ ತಿಂಗಳಿಗೆ ₹ 1.2 ಲಕ್ಷ ಪಾವತಿಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದ್ದಾರೆ.

ವಿಚಾರಣಾ ನ್ಯಾಯಾಲಯದ ಆದೇಶ ತಡೆಹಿಡಿಯಲು ಕಾರಣ ಏನೆಂಬುದನ್ನು ತಿಳಿಸದೆ ಮೇಲ್ಮನವಿ ನ್ಯಾಯಾಲಯ ಜೀವನಾಂಶ ಮೊತ್ತ ಕಡಿಮೆ ಮಾಡುವಂತಿಲ್ಲ. ಅರ್ಜಿದಾರೆಗೆ ತುರ್ತು ಆರ್ಥಿಕ ಸಹಾಯದ ಅಗತ್ಯವಿದ್ದು ಮಧ್ಯಂತರ ಜೀವನಾಂಶದ ಮೊತ್ತವಾಗಿ ಪತಿ ಒಂದು ಪೈಸೆಯನ್ನೂ ಆಕೆಗೆ ನೀಡಿಲ್ಲ ಎಂದು ಗೊತ್ತಿದ್ದೂ ಮೇಲ್ಮನವಿ ನ್ಯಾಯಾಲಯ ಮಧ್ಯಂತರ ಜೀವನಾಂಶದ ಮೊತ್ತವನ್ನು ಕಡಿತಗೊಳಿಸಿದೆ ಎಂಬುದಾಗಿ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು.

ದಂಪತಿ  2016 ರಲ್ಲಿ ವಿವಾಹವಾಗಿ ಬ್ರಿಟನ್‌ನಲ್ಲಿ ನೆಲೆಸಿದ್ದರು. ಪತ್ನಿ ಮೇಲೆ ಕೌಟುಂಬಿಕ ಹಿಂಸಾಚಾರ ಎಸಗಿದ ಪರಿಣಾಮ 2017ರಲ್ಲಿ ಆಕೆ ಜೀವಚ್ಛವದ ಸ್ಥಿತಿ ತಲುಪಿದ್ದರು.

ಕಡೆಗೆ ಉತ್ತಮ ಚಿಕಿತ್ಸೆ ಕೊಡಿಸುವುದಕ್ಕಾಗಿ ಆಕೆಯ ಕುಟಂಬಸ್ಥರು ಆಕೆಯನ್ನು ಭಾರತಕ್ಕೆ ಕರೆತಂದಿದ್ದರು. ಪತಿ ಕೂಡ ಆಕೆಯೊಂದಿಗೆ ಭಾರತಕ್ಕೆ ಮರಳಿದ್ದ.

ಪತ್ನಿಯ ವೈದ್ಯಕೀಯ ವೆಚ್ಚಕ್ಕಾಗಿ ತಿಂಗಳಿಗೆ ₹1,50,000 ಕಳುಹಿಸುವುದಾಗಿ ಪತಿ ಭರವಸೆ ನೀಡಿದ್ದನಾದರೂ ಅದು ಈಡೇರಲಿಲ್ಲ ಎಂದು ಪತ್ನಿಯ ಕುಟುಂಬದ ಸದಸ್ಯರು ದೂರಿದ್ದರು. ಈ ಹಿನ್ನೆಲೆಯಲ್ಲಿ ಜೀವನಾಂಶ ಕೋರಿ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದರು.