ಹೊಸದಿಲ್ಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ.
ವಿಚಾರಣಾ ನ್ಯಾಯಾಲಯವು ನೀಡಿದ್ದ ಜಾಮೀನಿಗೆ ತಡೆ ನೀಡಿರುವ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಹೈ ಆದೇಶವನ್ನು ರದ್ದು ಮಾಡಲಿ ನಿರಾಕರಿಸಿದ್ದು, ಮೊದಲು ಹೈಕೋರ್ಟ್ ಆದೇಶ ಪ್ರಕಟಿಸಲಿ ಎಂದಿದೆ.
ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಮೊದಲ ದಿನದ ವಿಚಾರಣೆಯಲ್ಲಿ ಜಾಮೀನಿಗೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದರು. ಹೈಕೋರ್ಟ್ ಆದೇಶ ನೀಡುವವರೆಗೆ ಸಿಎಂ ಏಕೆ ಹೊರಗಿರಬಾರದು ಎಂದು ಸಿಂಘ್ವಿ ಪ್ರಶ್ನಿಸಿದ್ದಾರೆ. ಸಿಎಂ ಪರವಾಗಿ ಜಾಮೀನು ಆದೇಶವಿದೆ ಎಂದು ವಾದಿಸಿದರು.
ಒಂದು ಅಥವಾ ಎರಡು ದಿನದಲ್ಲಿ ಹೈಕೋರ್ಟ್‌ನ ಆದೇಶ ಬರಲಿದೆ ಎಂದು ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸುವ ಎಎಸ್‌ಜಿ ಎಸ್‌ವಿ ರಾಜು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಈಗ ಆದೇಶವನ್ನು ಜಾರಿಗೊಳಿಸಿದರೆ, ಅದು ಸಮಸ್ಯೆಯನ್ನು ಪೂರ್ವಭಾವಿಯಾಗಿ ನಿರ್ಣಯಿಸುತ್ತದೆ ಎಂದು ಹೇಳುತ್ತದೆ. ಇದು ಅಧೀನ ನ್ಯಾಯಾಲಯವಲ್ಲ, ಇದು ಹೈಕೋರ್ಟ್ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜೈಲು ಪಾಲಾಗಿರುವ ಅರವಿಂದ ಕೇಜ್ರಿವಾಲ್ ಅವರಿಗೆ ಇತ್ತೀಚೆಗಷ್ಟೇ ದಿಲ್ಲಿಯ ರೋಸ್ ಅವೆನ್ಯೂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಜಾಮೀನಿಗೆ ತಡೆ ತಂದಿದ್ದ ಹೈಕೋರ್ಟ್ ಜೂನ್ 25ಕ್ಕೆ ವಿಚಾರಣೆಯನ್ನು ಮುಂದೂಡಿತ್ತು. ಇದನ್ನು ಪ್ರಶ್ನಿಸಿ ಕೇಜ್ರಿವಾಲ್ ಸುಪ್ರೀಂ ಮೊರೆ ಹೋಗಿದ್ದರು. ಆದರೆ ಅಲ್ಲೂ ಹಿನ್ನಡೆಯಾಗಿದೆ.