ಬೆಂಗಳೂರು : ಕನ್ನಡ ಸಾಹಿತ್ಯ ಲೋಕಕ್ಕೆ ಇತಿಹಾಸಾತ್ಮಕ ಗೌರವವೊಂದು ಲಭಿಸಿದ್ದು, ಕನ್ನಡದ ಪ್ರಸಿದ್ಧ ಲೇಖಕಿ ಬಾನು ಮುಷ್ತಾಕ್ ಅವರು ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಗೆದ್ದಿರುವುದು ನಾಡಿನಲ್ಲಿ ಹರ್ಷದ ಅಲೆ ಎಬ್ಬಿಸಿದೆ. ಈ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಬಾನು ಮುಷ್ತಾಕ್ ರಚಿಸಿದ ‘ಹೃದಯ ದೀಪ’ ಎಂಬ ಕೃತಿಗೆ ಈ ಪ್ರಶಸ್ತಿ ದೊರೆತಿದ್ದು, ಅದನ್ನು ದೀಪಾ ಭಸ್ತಿ ಇಂಗ್ಲಿಷ್ ಭಾಷೆಗೆ ಯಶಸ್ವಿಯಾಗಿ ಅನುವಾದಿಸಿದ್ದಾರೆ. ಇಂಗ್ಲಿಷ್ ಅನುವಾದದ ಮೂಲಕ ಈ ಕೃತಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಬೂಕರ್ ಪ್ರಶಸ್ತಿಗೆ ಭಾಜನವಾಗಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು. ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಷ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ. ಅವರ ಸಾಹಿತ್ಯಮಯ ಪ್ರಯಾಣ ಇನ್ನೂ ಸತ್ವಯುತವಾಗಿರಲಿ ಎಂದು ಹಾರೈಸುತ್ತೇನೆ,” ಎಂದಿದ್ದಾರೆ.
‘ಹೃದಯ ದೀಪ’ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿರುವ ದೀಪಾ ಭಸ್ತಿಯವರು ಕೂಡ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕನ್ನಡದ ಸಾಹಿತ್ಯ ಕೃತಿಯನ್ನು ಜಗತ್ತಿನ ಮುಂದೆ ಉಜ್ವಲವಾಗಿ ಇಳಿಸಲಾಗಿದೆ. ಅವರಿಗೆ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.














