ಮೈಸೂರು(Mysuru): ಈ ಬಾರಿ ಅದ್ದೂರಿ ದಸರಾ ಆಚರಿಸಲು ತೀರ್ಮಾನ ತೆಗೆದುಕೊಂಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವಂತೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಚಾಮುಂಡೇಶ್ವರಿ ವರ್ಧಂತೋತ್ಸವ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆನ್ನೆಯಷ್ಟೇ ಉನ್ನತ ಮಟ್ಟದ ಸಭೆ ನಡೆಸಿದ್ದೇವೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ಅದ್ದೂರಿ ದಸರಾ ನಡೆಸಲಾಗಲಿಲ್ಲ.ಸಂಪ್ರದಾಯಿಕವಾಗಿ ದಸರಾ ಆಚರಿಸಿದ್ದೆವು. ಆದರೆ ಈ ಬಾರಿ ಗಜಪಯಣ ಸೇರಿ ಎಲ್ಲಾ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸುತ್ತೇವೆ ಎಂದರು.
ಪ್ರವಾಸಿಗರನ್ನು ಸೆಳೆಯಲು ಹೊಸ ಆಕರ್ಷಣೆಗಳನ್ನು ಮಾಡಲು ಪ್ರಯತ್ನ ಮಾಡುತ್ತೇವೆ. ಮುಂದಿನ ಒಂದು ವಾರದಲ್ಲಿ ಮೈಸೂರು ಟೂರಿಸಮ್ ಸೆರ್ಕ್ಯುಟ್ ಘೋಷಣೆ ಮಾಡುತ್ತೇವೆ. ಈ ಬಾರಿಯ ದಸರಾಗೆ ಹೊಸ ಆಯಾಮ ಸಿಗಲಿದೆ ಎಂದು ಹೇಳಿದರು.
ದಸರಾ ಉದ್ಘಾಟಕರ ಬಗ್ಗೆ ಚರ್ಚೆಯಾಗಿದೆ. ಮುಂದೆ ಎಲ್ಲರ ಅಭಿಪ್ರಾಯ ಪಡೆದು ಸೂಕ್ತ ವ್ಯಕ್ತಿ ಆಯ್ಕೆ ಮಾಡುತ್ತೇವೆ. ದಸರಾ ಪ್ರಾಧಿಕಾರ ರಚನೆ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಮುಖ್ಯಮಂತ್ರಿಗಳಿಗೆ ಸಚಿವರುಗಳಾದ ಗೋವಿಂದ ಕಾರಜೋಳ, ಎಸ್.ಟಿ.ಸೋಮಶೇಖರ್, ಶಾಸಕರುಗಳಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ ಸಾಥ್ ನೀಡಿದರು.