ಮೈಸೂರು (Mysuru)- ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ (ಜೂನ್ 21) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಂಸ್ಕೃತಿಕ ನಗರಿ, ಯೋಗನಗರಿ ಮೈಸೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ಸಿದ್ಧತೆಗಳು ಭರದಿಂದ ಸಾಗಿದೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರ್ವಭಾವಿ ತಾಲೀಮು ಅನ್ನು ಮೈಸೂರು ಯೋಗ ಫೆಡರೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ನಾಳೆ (ಮೇ 22) ಬೆಳಿಗ್ಗೆ 6 ಗಂಟೆಯಿಂದ 7.30ರವರೆಗೆ ಮಹಾರಾಜ ಕಾಲೇಜು ಕ್ರಿಕೆಟ್ ಗ್ರೌಂಡ್ ನಲ್ಲಿ ತಾಲೀಮು ನಡೆಯಲಿದೆ.
ಇದೇ ವೇಳೆ ಅಂತಾರಾಷ್ಟ್ರೀಯ ಯೋಗ ದಿನದ ಶಿಷ್ಟಾಚಾರದ ಬಗ್ಗೆ ಜನರಿಗೆ ಅರಿವು ಮೂಡಿಸಿ, ತರಬೇತಿ ನೀಡಲು ಯೋಗ ತರಬೇತುದಾರರನ್ನೂ ತಯಾರಿ ಮಾಡಲಾಗುತ್ತದೆ. ಭಾನುವಾರದ ಈ ಕಾರ್ಯಕ್ರಮಕ್ಕೆ ಮೈಸೂರಿನ ಎಲ್ಲಾ ಯೋಗ ಸಂಸ್ಥೆಗಳು ಪಾಲ್ಗೊಳ್ಳಬೇಕಾಗಿ ವಿನಂತಿಸಲಾಗಿದೆ. ಸಾರ್ವಜನಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದು ಯೋಗ ಫೆಡರೇಷನ್‌ನ ಅಧ್ಯಕ್ಷರಾದ ಶ್ರೀಹರಿ ಅವರು ತಿಳಿಸಿದ್ದಾರೆ.