ಪೋಷಕಾಂಶಗಳು :
ವಿಟಿಮಿನ್ ಎ. ಮಿಟಮಿನ್ ಸಿ, ಕಬ್ಬಿಣ, ರಂಜಕ ಮತ್ತು ಸುಣ್ಣ (ಕ್ಯಾಲ್ಸಿಯಂ) ದ ಅಂಶಗಳಿರುತ್ತವೆ.
9 ಮೊಟ್ಟಿ ಅಥವಾ 9 ಕಪ್ ಬಾದಾಮಿ ಹಾಲು ಅಥವಾ 8 ಕಪ್ ಹಾಲು ಸೇವಿಸಿದಲ್ಲಿ ದೊರೆಯುವ ವಿಟಮಿನ್ ‘ಎ’ ಅಂಶ 1 ಕಪ್ ನುಗ್ಗೆಸೊಪ್ಪಿನ ರಸದಲ್ಲಿ ಇರುತ್ತದೆ.
6 ಕಿತ್ತಲೆ ಅಥವಾ 8 ಸೇಬು ಅಥವಾ 6 ನಿಂಬೆ ಅಥವಾ 16 ಬಾಳೆಹಣ್ಣು ಅಥವಾ 20 ಮಾವಿನ ಹಣ್ಣು ತಿಂದಲ್ಲಿ ಸಿಗುವ ಮಿಟಮಿನ್ ‘ಸಿ’ ಅಂಶವು 1 ಕಪ್ ನುಗ್ಗೆ ಎಲೆಯ ರಸದಲ್ಲಿ ಸಿಗುತ್ತದೆ
ಅದರಂತೆ ಒಂದು ಮುಷ್ಟಿ ಸೊಪ್ಪು ನೀಡುವ ಕ್ಯಾಲ್ಸಿಯಂ ಅಂಶ 900 ಗ್ರಾಂ ಬಾದಾಮಿ, 8 ಕಿತ್ತಲೆ ಅಥವಾ 3 ಕೆ.ಜಿ. ಪಪ್ಪಾಯ ಹಣ್ಣಿಗೆ ಸಮಾನ.*
ಔಷಧೀಯ ಗುಣಗಳು
೧.ಪ್ರತಿದಿನ ಮಕ್ಕಳಿಗೆ ಒಂದು ಲೋಟ ನುಗ್ಗೆ ಸೊಪ್ಪಿನ ರಸವನ್ನು ನೀಡಿದಲ್ಲಿ ಇರುಳುಗಣ್ಣು ತೊಂದರೆಬಾರದಂತೆ ತಡೆಗಟ್ಟಬಹುದಲ್ಲದೇ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.
2.ಭೇದಿ ಉಂಟಾದಾಗ ಒಂದು ಚಮಚೆ ನುಗ್ಗೆ ಎಲೆಯ ರಸಕ್ಕೆ ಒಂದು ಚಮಚೆ ಜೇನುತುಪ್ಪ ವನ್ನು ಒಂದು ಲೋಟ ಎಳನೀರಿನಲ್ಲಿ ಬೆರೆಸಿ ಎರಡು ಗಂಟೆಗಳಿಗೊಮ್ಮೆ ಕುಡಿಯಬೇಕು.
3.ರಕ್ತಹೀನತೆ (ಅನಿಮಿಯಾ) ಯಿಂದ ಬಳಲುವವರು 150 ಗ್ರಾಂ ಎಳೆಯ ಎಲೆಗಳನ್ನು ಮತ್ತು 100 ಗ್ರಾಂ ನುಗ್ಗೆ ಹೂಗಳನ್ನು ಸ್ವಲ್ಪ ಉಪ್ಪು ಬೆರೆಸಿದ ನೀರಿನಲ್ಲಿ ಕಾಯಿಸಿ ಕುಡಿಯಬೇಕು.
4.ನುಗ್ಗೆ ಬೇರನ್ನು ಕುಟ್ಟಿ ಪುಡಿಮಾಡಿ ಎಳ್ಳೆಣ್ಣೆಯಲ್ಲಿ ಬೆರೆಸಿ ಕಾಯಿಸಿ ತೈಲ ತಯಾರಿಸಿಟ್ಟು ಕೊಂಡು ಚರ್ಮರೋಗಗಳಿಗೆ ಲೇಪಿಸಬೇಕು.
5.ನುಗ್ಗೆ ಸೊಪ್ಪನ್ನು ಹಿಂಡಿ ಬರುವ ರಸವನ್ನು ಸಣ್ಣಗಿನ ಉರಿಯ ಮೇಲಿರಿಸಿ ಬಿಸಿ ಮಾಡಿ ನಂತರ ಇದಕ್ಕೆ ಹಾಲು, ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸಿದಲ್ಲಿ ಶಾರೀರಿಕ ಬೆಳವಣಿಗ ಉತ್ತಮವಾಗುವುದಲ್ಲದೇ ರೋಗನಿರೋಧಕ ಶಕ್ತಿಯೂ ಅಧಿಕವಾಗುತ್ತದೆ.
6.ನುಗ್ಗೆಯ ಎಳೆಕಾಯಿಗಳನ್ನು ಆಹಾರದಲ್ಲಿ ಹೆಚ್ಚು ಬಳಸುವುದರಿಂದ ಜಂತುಹುಳು ಮತ್ತು ಸೂಜಿಹುಳುಗಳನ್ನು ತಡೆಗಟ್ಟಬಹುದು.
7.ಮೂತ್ರ ಕಟ್ಟಿದ್ದಲ್ಲಿ ನುಗ್ಗೆಯ ಎಲೆ, ಹೂ, ಕಾಯಿ, ಬೀಜ ಎಲ್ಲವನ್ನೂ ಸೇರಿಸಿ ರಸ ತೆಗೆದು ಕುಡಿಯಬೇಕು. ಇದರಿಂದ ಮೂತ್ರಸ್ರಾವ ಸಲೀಸಾಗಿ ಆಗುತ್ತದೆ.
8.ಸೊಪ್ಪಿನ ರಸಕ್ಕೆ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿಕೊಂಡಲ್ಲಿ ಮುಖದಕಾಂತಿಯು ಹೆಚ್ಚುತ್ತದೆ.
9.ಗರ್ಭಿಣಿಯರಿಗೆ ನುಗ್ಗೆಸೊಪ್ಪನ್ನು ಬೇಯಿಸಿ ರಸ ತೆಗೆದು ಕುಡಿಸಿದಲ್ಲಿ ಹೆರಿಗೆಯ ನಂತರ ಎದೆಹಾಲಿನ ಉತ್ಪತ್ತಿ ಸಮೃದ್ಧಿಯಾಗಿ ತಾಯಿ-ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ.
10.ಬಾಯಿಹುಣ್ಣಿನ ತೊಂದರೆಯಿರುವಾಗ ಎಳೆಯ ಎಲೆಗಳನ್ನು ಅಗಿಯಬೇಕು.
11.ಅಲ್ಪರ್‌ನಿಂದ (ಉದರದ ಹುಣ್ಣಿನಿಂದ ಬಳಲುವವರು ನುಗ್ಗೆ ಎಲೆಯನ್ನು ಅರೆದು ಮೊಸರಿನೊಂದಿಗೆ ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಗೆ ಸೇವಿಸಬೇಕು.
12.ನುಗ್ಗೆಯನ್ನು ಹಿತಮಿತವಾಗಿ ಬಳಸಿದಲ್ಲಿ ಹೃದಯಕ್ಕೆ ಬಲದಾಯಕ, ಅತಿಯಾಗಿ ಬಳಸಿದಲ್ಲಿ ಉರಿ, ಪಿತ್ತ ಹೆಚ್ಚುತ್ತದೆ. ಹೊಟ್ಟೆನೋವು, ಚರ್ಮರೋಗ, ಕ್ಷಯ, ದಮ್ಮು, ಹೊಟ್ಟೆಯುಬ್ಬರ,ಅಜೀರ್ಣವುಳ್ಳವರಿಗೆ ಪಥ್ಯದ ಆಹಾರವಾಗಿದೆ ನುಗ್ಗೆ
13 ಯಕೃತ್ತಿನ ತೊಂದರೆ ಇರುವವರಿಗೆ ನುಗ್ಗೆ ಉತ್ತಮ ಆಹಾರ.
14.ಸಂಧಿವಾತದಿಂದ ಬಳಲುವವರು ಬೇರಿನ ತೊಗಟೆಯನ್ನು ಜಜ್ಜಿ ನೋವಿರುವ ಜಾಗಕ್ಕೆ ಲೇಪಿಸಿಕೊಂಡಲ್ಲಿ ನೋವು ಕಡಿಮೆಯಾಗುತ್ತದೆ ಅಲ್ಲದೇ ನುಗ್ಗೆ ಬೀಜದಿಂದ ತಯಾರಿಸಿದೆ ಎಣ್ಣೆಯೂ ನೋವು ಊತ ಕಡಿಮೆ ಮಾಡುತ್ತದೆ.
ಅಡುಗೆ
ನುಗ್ಗೆಯನ್ನು ಅಡುಗೆಯಲ್ಲಿ ಬಳಸದಿರುವವರೇ ಬಹುಶಃ ಸಿಗಲಿಕ್ಕಿಲ್ಲ, ನುಗ್ಗೆಕಾಯಿ ಸಾಂಬಾರ್, ಪಲ್ಯ ಅತ್ಯಂತ ರುಚಿಕರ ನುಗ್ಗೆಕಾಯಿಯ ಸೊಪ್ಪು, ಹೂವನ್ನು ವಿವಿಧ ಕಾಳುಗಳೊಂದಿಗೆ ಬೆರೆಸಿ ಪಲ್ಯ ತಯಾರಿಸಬಹುದು.
ನುಗ್ಗೆ ಸೊಪ್ಪಿನ ಪಲ್ಯ: ನುಗ್ಗೆಯ ಎಳೆಯ ಸೊಪ್ಪನ್ನು ತೊಳೆದುಕೊಳ್ಳಬೇಕು ಈರುಳ್ಳಿಯನ್ನು ಮತ್ತು ಹಸಿಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿಕೊಂಡು ಒಗ್ಗರಣೆ ಹಾಕಿಕೊಳ್ಳಬೇಕು. ಈರುಳ್ಳಿ ಸ್ವಲ್ಪ ಬಾಡಿಸಿಕೊಂಡು ಸೊಪ್ಪು ಬೆರೆಸಬೇಕು. ಸೊಪ್ಪು ಬೆಂದ ನಂತರ ಉಪ್ಪು ಬೆರೆಸಿ ಕೊಳ್ಳಬೇಕು. ಈ ಪಲ್ಯ ಹಾಗೆಯೇ ಬಳಸಬಹುದು ಇಲ್ಲವೇ ಬೇಯಿಸಿದ ಹೆಸರುಕಾಳು, ಅಲಸಂದೆ ಕಾಳು ಬೆರೆಸಿ ಸೇವಿಸಬಹುದು ರುಚಿಗೆ ನಿಂಬೆರಸವನ್ನು ಸೇರಿಸಬಹುದು.
ನುಗ್ಗೆ ಹೂವಿನ ಪಲ್ಯ ನುಗ್ಗೆ ಹೂವನ್ನು ಬೇಯಿಸಿದ ಬೇಳೆಯೊಂದಿಗೆ ಬೆರೆಸಿ ಪಲ್ಯ ಮಾಡಿದಲ್ಲಿ ರುಚಿಕರವಾಗಿರುತ್ತದೆ ಅಲ್ಲದೇ ಇತರ ತರಕಾರಿಗಳೊಂದಿಗೆ ಬೆರೆಸಿಯೂ ಪಲ್ಯ ತಯಾರಿಸಿಕೊಳ್ಳಬಹುದು. ಹಾಗೆಯೇ ಹೂವನ್ನು ಒಗ್ಗರಣೆಯಲ್ಲಿ ಬಾಡಿಸಿ ಉಪ್ಪು, ಖಾರದ ಪುಡಿ ಬೆರೆಸಿಯೂ ಪಲ್ಯ ತಯಾರಿಸಬಹುದು
ನುಗ್ಗೆಕಾಯಿ ಸಾಂಬಾರ್ : ಬೇಳೆ ಬೇಯಿಸಿಕೊಂಡು ಆದರೊಂದಿಗೆ ನುಗ್ಗೆಕಾಯಿ ಬೇಯಿಸಿ ಅದಕ್ಕೆ ತೆಂಗಿನತುರಿ, ಟೊಮಾಟೋ ಇಲ್ಲವೇ ಹುಣಸೆರಸ ಬೆರೆಸಿ ಸಾಂಬಾರ್ ತಯಾರಿಸ ಬೇಕು. ಒಗ್ಗರಣೆಗೆ ಒಣಮೆಣಸಿನಕಾಯಿ, ನಾಸುವೆ, ಜೀರಿಗೆ, ಉದ್ದಿನಬೇಳೆ ಹಾಕಬೇಕು.
ನುಗ್ಗೆಕಾಯಿ ಪಲ್ಯ : ಆಲೂಗಡ್ಡೆ ಬೇಯಿಸಿ ಅದರೊಂದಿಗೆ ಬೇಯಿಸಿದ ನುಗ್ಗೆಕಾಯಿ ಬೆರೆಸಿ, ಖಾರದಪುಡಿ, ಉಪ್ಪು, ತೆಂಗಿನಕಾಯಿ ತುರಿ ಹಾಕಿದಲ್ಲಿ ತುಂಬ ರುಚಿಕರವಾಗಿರುತ್ತದೆ. ಬಗ್ಗರಣೆಗೆ ಸಾಸುವೆ, ಜೀರಿಗೆ, ಉದ್ದಿನಬೇಳೆ ಹಾಕಬೇಕು.