ಮನೆ ಯೋಗಾಸನ ವಿಲೋಮ ಪ್ರಾಣಾಯಾಮ

ವಿಲೋಮ ಪ್ರಾಣಾಯಾಮ

0

‘ ಲೋಮ’ವೆಂದರೆ ಕೂದಲು, ‘ವಿ’ ಎಂದರೆ, ವ್ಯತಿರಿಕ್ತ, ವಿರುದ್ಧ ಆದುದರಿಂದ ‘ವಿಲೋಮ’ ಪದಕ್ಕೆ ಅರ್ಥ ಕೂದಲಿಗೆ, ಕ್ರಮಕ್ಕೆ, ದಿಕ್ಕಿಗೆ ವಿರುದ್ಧವಾಗಿ ನಡೆಸುವುದು.

Join Our Whatsapp Group

‘      ವಿಲೋಮ ಪ್ರಾಣಾಯಾಮ’ದಲ್ಲಿ ‘ಪೂರಕ’ವಾಗಲಿ, ಇಲ್ಲವೆ ‘ರೇಚಕ’ವಾಗಲಿ ತಡೆಯಿಲ್ಲ ದಂತೆ ಒಂದೇ ಸಮನಾಗಿ ಉದ್ದಕ್ಕೂ ನಡೆಸುವ ಕ್ರಮವಿರದೆ. ಅವುಗಳನ್ನು ನಡು ನಡುವೆ ತಡೆದು ನಡೆಸಬೇಕು. ಉದಾಹರಣೆಗೆ – ಒಂದೇ ಸಮನಾಗಿ ಉಸಿರನ್ನು ಒಳಕ್ಕೆಳೆದು ಶ್ವಾಸಕೋಶಗಳನ್ನು ತುಂಬುವುದಕ್ಕೆ 15 ಸೆಕೆಂಡುಗಳ ಕಾಲ ಮತ್ತು ಅದನ್ನು ಸಾಮರಸ್ಯತೆಯಿಂದ ಹೊರಕ್ಕೆ ಬಿಡುವುದಕ್ಕೆ 15 ಸೆಕೆಂಡುಗಳ ಕಾಲ ತೆಗೆದುಕೊಂಡರೆ, ‘ವಿಲೋಮ’ದ ‘ಪೂರಕ’ 3 ಸೆಕೆಂಡುಗಳ ಕಾಲ ಎಳೆದು, ಮತ್ತೆ 2 ಸೆಕೆಂಡುಗಳ ಕಾಲ ತಡೆದು – ಹೀಗೆ ಉಸಿರನ್ನು ಒಳಕ್ಕೆಳೆದುದೇ ಆದರೆ ಒಟ್ಟು ‘ಪೂರಕ’ಕ್ಕೆ 25 ಸೆಕೆಂಡುಗಳ ಕಾಲಾವಧಿ ಬೇಕು. ಅದರಂತೆ ‘ರೇಚಕ’ಕ್ಕೂ 25 ಸೆಕೆಂಡುಗಳು ಬೇಕು. ಇದನ್ನು ಅಭ್ಯಸಿಸುವ ಕ್ರಮವನ್ನು ಈ ಕೆಳಗೆ  ವಿವರಿಸುವಂತೆ ಎರಡು ಹಂತಗಳಲ್ಲಿ ಆಚರಿಸಬೇಕು

 ಅಭ್ಯಾಸಕ್ರಮ

೧. ‘ವಿಲೋಮ ಪ್ರಾಣಾಯಾಮ’ವನ್ನು ಕುಳಿತುಕೊಂಡಾಗಲಿ, ಇಲ್ಲವೆ ಮಲಗಿ ಕೊಂಡಾಗಲಿ ಆಚರಿಸಬಹುದು.

೨. ಕುಳಿತುಕೊಂಡು ಮಾಡುವುದಾದರೆ, ಬೆನ್ನನ್ನು ನೇರವಾಗಿಸಿ, ತಲೆಯನ್ನು ಮುಂಡದ ಕಡೆಗೆ ಬಾಗಿಸಿ, ಗದ್ದವನ್ನು ಕತ್ತಿನೆಲುಬುಗಳ ನಡುವೆ ಮತ್ತು ಎದೆಯೆಲುಬಿನ ಮೇಲ್ಬಾಗಳಲ್ಲಿರುವ ಕುಳಿಯಲ್ಲಿ ಒತ್ತಿಡಬೇಕು. ಇದು ‘ಜಾಲಂಧರಬಂಧ’. ಆ ಬಳಿಕ, ಕೈಗಳನ್ನು ಈ ಹಿಂದೆಯೇಞ ವಿವರಿಸಿದಂತೆ ‘ಜ್ಞಾನಮುದ್ರೆ’ಯಲ್ಲಿಡಬೇಕು.

೩. ಅಮೇಲೆ, ಎರಡು ಸೆಕೆಂಡುಗಳ ಕಾಲ ಉಸಿರನ್ನು ಹಾಗೆಯೇ ತಡೆದಿಟ್ಟು, ಮತ್ತೆ ಎರಡು ಸೆಕೆಂಡುಗಳ ಕಾಲ ಒಳಕ್ಕೆಳೆದು, ಎರಡು ಸೆಕೆಂಡುಗಳ ಕಾಲ ತಡೆದು ೃೃಮತ್ತೆಳೆದು – ಈ ಬಗೆಯಲ್ಲಿ ಶ್ವಾಸಕೋಶಗಳು ಪೂರ್ಣವಾಗಿ ತುಂಬುವವರೆಗೂ ಈ ‘ಪೂರಕ ಕ್ರಮವನ್ನಾಚರಿಸಬೇಕುಗ

೪. ಇದಾದ ಮೇಲೆ ಮೂಲಬಂಧ’ವನ್ನಾಚರಿಸಿ, ಉಸಿರನ್ನು ಅಭ್ಯಾಸಿಯ ಶಕ್ತಿಗನು ಗುಣವಾಗಿ 5 ಅಥವಾ 10 ಸೆಕೆಂಡುಗಳ ಕಾಲ ಅಂತರಕುಂಭಕವನ್ನು ಮಾಡಬೇಕು

೫. ಉಸಿರನ್ನು ಒಳಕ್ಕೆಳೆದಾಗ ಮತ್ತು ಅದನ್ನು ತಡೆದಿಡುವ ಕಾಲದಲ್ಲಿ ಮಾತ್ರ ‘ಮೂಲಬಂಧ’ವನ್ನು ಆಚರಿಸಬೇಕು.

೬. ಆ ಬಳಿಕ, ‘ಉಜ್ಜಾಯೀ ಪ್ರಾಣಾಯಾಮ’ದಲ್ಲಿ ಮಾಡುವಂತೆ ಉಸಿರನ್ನು ‘ಹಮ್ ‘ಮ್‌ಮ್’ ಎಂಬ ಶಬ್ದ ಬರುವಂತೆ ಹೊರಕ್ಕೆ ಬಿಡಬೇಕು. ‘ರೇಚಕ’ ಕ್ರಮದಲ್ಲಿ ‘ಮೂಲಬಂಧ’ವನ್ನು ಸಡಿಲಿಸಬೇಕು.

೭. ಇಲ್ಲಿಗೆ ‘ವಿಲೋಮ ಪ್ರಾಣಾಯಾಮ ಚಕ್ರದಲ್ಲಿ, ಮೊದಲನೆಯ ಹಂತದಲ್ಲಿ ಮೊದಲನೆಯ ಸುತ್ತು (ಆವೃತ್ತಿ) ಪೂರೈಸಿದಂತಾಗುತ್ತದೆ.

೮. ಈ ಹಂತದಲ್ಲಿ ಎಡೆಬಿಡದೆ (ಒಂದೇ ಸಮನಾಗಿ) ೧೦ – ೧೫ ಸಲ ಆವರ್ತಿಸಬೇಕು.

 ಹಂತ 11

೯. ಒಂದೆರಡು ನಿಮಿಷಗಳ ಕಾಲ ವಿಶ್ರಮಿಸಿಕೊಳ್ಳಬೇಕು.

೧೦. ‘ಆ ಬಳಿಕ, ‘ಉಜ್ಜಾಯಿ’ ಪ್ರಾಣಾಯಾಮದಲ್ಲಿರುವಂತೆ ‘ಜಾಲಂಧರಬಂಧ’ ದಲ್ಲಿದ್ದು, ಆಳವಾಗಿ ಉಸಿರನ್ನು ಎಡೆ ತಡೆಯಿಲ್ಲದೆ ಒಂದೇ ಸಮನಾಗಿ ‘ಸಸ್‌ಸ್‌ಸ್’ ಶಬ್ದ ಮಾಡುತ್ತಿರುವಂತೆ ಒಳಕ್ಕೆಳೆದು, ಶ್ವಾಸಕೋಶಗಳನ್ನು ಪೂರ್ಣವಾಗಿ ತುಂಬಿಸಬೇಕು.

೧೧. ಅನಂತರ, ‘ಮೂಲಬಂಧದಲ್ಲಿದ್ದು ಸುಮಾರು 5 ರಿಂದ 10 ಸೆಕೆಂಡುಗಳ ಕಾಲ ಉಸಿರನ್ನು ಒಳಗೇ (ಅಂತರಕುಂಭಕ) ತಡೆದಿರಿಸಬೇಕು.

೧೨. ತರುವಾಯ, ಉಸಿರನ್ನು 2 ಸೆಕೆಂಡುಗಳ ಕಾಲ ಹೊರಬಿಟ್ಟ ಮೇಲೆ, 2 ಸೆಕೆಂಡುಗಳ ಕಾಲ ತಡೆದು, ಮತ್ತೆ 2 ಸೆಕೆಂಡುಗಳ ಕಾಲ ಹೊರಬಿಟ್ಟು ಮತ್ತೆ 2 ಸೆಕೆಂಡುಗಳ ಕಾಲ ತಡೆದು – ಈ ಬಗೆಯಲ್ಲಿ ಶ್ವಾಸಕೋಶಗಳು ಬರಿದಾಗುವವರೆಗೂ ಆಚರಿಸಬೇಕು.

೧೩. ಇದರಲ್ಲಿ ಉಸಿರನ್ನು ತಡೆದಿಡುವ ಸಮಯದಲ್ಲಿ ‘ಮೂಲಬಂಧ’ದಲ್ಲಿರಬೇಕು.

೧೪. ಇಲ್ಲಿಗೆ ‘ವಿಲೋಮ ಪ್ರಾಣಾಯಾಮ’ದ ಎರಡನೇ ಹಂತದಲ್ಲಿ ಮೊದಲನೆಯ ಆವೃತ್ತಿ ಪೂರೈಸಿದಂತಾಯಿತು.

೧೫. ಈ ‘ವಿಲೋಮ ಪ್ರಾಣಾಯಾಮ’ದ ಎರಡನೇ ಹಂತದ ಅಭ್ಯಾಸವನ್ನು ಬಿಡದೆ 10 – 15 ಸಲ ಆವರ್ತಿಸಬೇಕು.

೧೬. ಇಲ್ಲಿಗೆ ‘ವಿಲೋಮ ಪ್ರಾಣಾಯಾಮ’ದ ಎರಡೂ ಹಂತಗಳೂ ಮುಗಿದಂತಾಯಿತು.

೧೭. ಇದಾದ ಮೇಲೆ, ‘ಶವಾಸನ’ದಲ್ಲಿ  ನೆಲದ ಮೇಲೆ ಒರಗಿದ ವಿಶ್ರಮಿಸಿಕೊಳ್ಳಬೇಕು.

 ಪರಿಣಾಮಗಳು

‘ವಿಲೋಮ ಪ್ರಾಣಾಯಾಮ’ದ ಮೊದಲನೆಯ ಹಂತದ ಅಭ್ಯಾಸವು ಕಡಿಮೆ ನೆತ್ತರೊತ್ತಡದಿಂದ ನರಳುವವರಿಗೆ ಉತ್ತಮ ಪರಿಣಾಮಕಾರಿ ಎರಡನೆಯ ಹಂತದ ಅಭ್ಯಾಸವು ಹೆಚ್ಚಿನ ರಕ್ತದೊತ್ತಡದಿಂದ ಪೀಡಿತರಾದವರಿಗೆ ಅನುಕೂಲವನ್ನು ಕಲ್ಪಿಸುತ್ತದೆ.

 ಎಚ್ಚರಿಕೆ

೧. ಹೆಚ್ಚಿನ ನೆತ್ತರೊತ್ತಡದಿಂದ ನರಳುವವರು ಈ ‘ವಿಲೋಮ ಪ್ರಾಣಾಯಾಮ’ದ ಎರಡನೇ ಹಂತದ ಅಭ್ಯಾಸವನ್ನು ಮಲಗಿಕೊಂಡೇ ಮಾಡಬೇಕು.

೨. ಹೃದಯ ರೋಗದಿಂದ ಪೀಡಿತರಾದವರು, ‘ಉಜ್ಜಾಯಿ’ ಮತ್ತು ‘ನಾಡಿಶೋಧನ ಪ್ರಾಣಾಯಾಮ’ಗಳಲ್ಲಿ ಸ್ವಾಮ್ಯವನ್ನು ಗಳಿಸಿದ ವಿನಾ ಈ ‘ವಿಲೋಮ ಪ್ರಾಣಾಯಾಮ’ಕ್ಕೆ ಕೈ ಹಚ್ಚಬಾರದು.