ಮನೆ ರಾಜ್ಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಸಿಸಿಬಿಗೆ ವರ್ಗಾವಣೆ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಸಿಸಿಬಿಗೆ ವರ್ಗಾವಣೆ

0

ಬೆಂಗಳೂರು: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ.

ಹೆಚ್​ಎಎಲ್​ ಪೊಲೀಸ್ ಠಾಣೆಯಲ್ಲಿ ಬಾಂಬ್ ಸ್ಫೋಟದ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದರ ತನಿಖೆಯನ್ನು ರಾಜ್ಯ ಸರ್ಕಾರವು ಸಿಸಿಬಿ ಹೆಗಲಿಗೆ ಒಪ್ಪಿಸಿದ್ದು, ತನಿಖಾಧಿಕಾರಿಯಾಗಿ ಎಸಿಪಿ ನವೀನ್ ಕುಲಕರ್ಣಿ ನೇಮಕಗೊಂಡಿದ್ದಾರೆ.

ಅಬ್ದುಲ್​ ಕಲಾಂ ಅವರ ಸ್ಪೂರ್ತಿಯಿಂದ ತೆರೆದಂತಹ ರಾಮೇಶ್ವರಂ ಕೆಫೆ, ಭಾರತದಾದ್ಯಂತ ಬ್ರಾಂಚ್​ಗಳನ್ನ ಹೊಂದಿದೆ. ರಾಮೇಶ್ವರಂ ಕೆಫೆ ದೇಗುಲದ ಕಾನ್ಸೆಪ್ಟ್​ನಲ್ಲಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲೂ ಹಲವು ಬ್ರಾಂಚ್ ಗಳಿದ್ದು, ಜನ ಸಾಮಾನ್ಯರ ಜೊತೆಗೆ ಐಟಿ ಸಿಬ್ಬಂದಿಯ ಹಾಟ್​ ಫೇವರೆಟ್ ಕೂಡ ಆಗಿದೆ. ಇಂತಹ ಕೆಫೆಯಲ್ಲಿ ನಿನ್ನೆ (ಮಾ.1) ಮಧ್ಯಾಹ್ನದ ವೇಳೆ ಬಾಂಬ್ ಬ್ಲಾಸ್ಟ್ ಆಗಿತ್ತು.

ವಿವಿಧ ತನಿಖಾ ತಂಡಗಳು ರಾತ್ರಿಯೆಲ್ಲಾ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ್ದು, ಸ್ಥಳದಲ್ಲಿ ಬಾಂಬ್ ಸ್ಯಾಂಪಲ್‌ಗಳನ್ನು ಸಂಗ್ರಹ ಮಾಡಲಾಗಿದೆ. ಸದ್ಯ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆಯಲ್ಲಿ ಗಾಯಗೊಂಡ 9 ಜನರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಆರೋಪಿಯ ಚಹರೆ, ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಲೆ ಮೇಲೆ ಟೊಪ್ಪಿ, ಗಡ್ಡದಾರಿಯಾಗಿರುವ ಶಂಕಿತ ವ್ಯಕ್ತಿ ಬಾಂಬ್ ಸ್ಫೋಟಿಸಿರುವ ಎಂಬ ಶಂಕೆ ವ್ಯಕ್ತವಾಗಿದೆ. ಶಂಕಿತ ವ್ಯಕ್ತಿ ಬಸ್ಸೊಂದರಲ್ಲಿ ಬಂದು ಕೆಫೆಗೆ ಹತ್ತಿರದ ಬಸ್ ಸ್ಟಾಪ್​ನಲ್ಲಿ ಇಳಿದು ಹೋಟೆಲ್​ಗೆ ಹೋಗಿದ್ದಾನೆ. ಕೈಯಲ್ಲಿ ಒಂದು ಬ್ಯಾಗ್ ಹಿಡಿದು ಕೆಫೆಯೊಳಗೆ ಹೋದವನು ಅಲ್ಲಿದ್ದ ಮರವೊಂದರ ಬಳಿ ಕೂತು ಇಡ್ಲಿ ತಿಂದಿದ್ದಾನೆ. ಗಡ್ಡಧಾರಿಯಾಗಿರುವ ಶಂಕಿತ ಮುಖಕ್ಕೆ ಮಾಸ್ಕ್ ಧರಿಸಿದ್ದಾನೆ ಮತ್ತು ತಲೆ ಮೇಲೆ ಟೋಪಿ ಇಟ್ಟುಕೊಂಡಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.