ಮನೆ ರಾಷ್ಟ್ರೀಯ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ

0

ಲಖನೌ: ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮನ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಲಿದೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿದ್ದಾರೆ.

ಈ ವಿಷಯವನ್ನು ‌ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಹಂಚಿಕೊಂಡಿರುವ ಮೋದಿ, ಇಂದು ಭಾವನಾತ್ಮಕ ದಿನ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ನ ಅಧಿಕಾರಿಗಳು ನನ್ನನ್ನು ಭೇಟಿಯಾಗಲು ನನ್ನ ನಿವಾಸಕ್ಕೆ ಬಂದಿದ್ದರು. ಶ್ರೀರಾಮ ಮಂದಿರದಲ್ಲಿ ಮೂರ್ತಿಯ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅಯೋಧ್ಯೆಗೆ ಬರುವಂತೆ ಅವರು ನನ್ನನ್ನು ಆಹ್ವಾನಿಸಿದ್ದಾರೆ.  ನನ್ನ ಜೀವಿತಾವಧಿಯಲ್ಲಿ ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುತ್ತಿರುವುದು ನನ್ನ ಅದೃಷ್ಟ ಎಂದು ಮೋದಿ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ ನಲ್ಲಿ ಮಾಹಿತಿ ಹಂಚಿಕೊಂಡಿರುವ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೆ.ಪಿ. ಮೌರ್ಯ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ 2024ರ ಜನವರಿ 22ರಂದು ಅಯೋಧ್ಯೆಗೆ ಆಗಮಿಸುವುದಾಗಿ  ಹೇಳಿದ್ದಾರೆ. ಇದು ರಾಮಭಕ್ತನಾಗಿ, ಶ್ರೀರಾಮ ಜನ್ಮಭೂಮಿ ಆಂದೋಲನದ ಯೋಧನಾಗಿ ನನಗೂ ಹೆಮ್ಮೆಯ ಕ್ಷಣವಾಗಿದೆ. ಜನವರಿ 22 ಸಮಸ್ತ ರಾಮಭಕ್ತರಿಗೆ ಹೆಮ್ಮೆಯ ದಿನ…500 ವರ್ಷಗಳ ನಂತರ ಇಲ್ಲಿ ರಾಮಲಲ್ಲಾ ಮೂರ್ತಿಗೆ ಸಲ್ಲಬೇಕಾದ ಗೌರವದೊಂದಿಗೆ ಪ್ರತಿಷ್ಠಾಪನೆಯಾಗಲಿದೆ. ಆಕ್ರಮಣಕಾರರು ಈ ಕಟ್ಟಡವನ್ನು ಕೆಡವಿದ್ದರು. ಕಾಂಗ್ರೆಸ್ ಮತ್ತು ಇತರೆ ರಾಜಕೀಯ ಪಕ್ಷಗಳು ತುಷ್ಟೀಕರಣ ರಾಜಕಾರಣಕ್ಕಾಗಿ  ರಾಮನನ್ನು ಪೌರಾಣಿಕ ವ್ಯಕ್ತಿ ಎಂದು ಕರೆಯುತ್ತಿದ್ದರು. ಆ ಮೂಲಕ ರಾಮಮಂದಿರ ನಿರ್ಮಾಣವನ್ನು ವಿರೋಧಿಸುತ್ತಿದ್ದರು. ಅವೆಲ್ಲಕ್ಕೂ ಜನವರಿ 22ರಂದು ಉತ್ತರ ಸಿಗಲಿದೆ’ ಎಂದಿದ್ದಾರೆ