ಲಕ್ನೋ: ಪ್ಲೇ ಆಫ್ ಹೊಸ್ತಿಲಲ್ಲಿ ನಿಂತಿರುವ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮಂಗಳವಾರ ರಾತ್ರಿ ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.
ಗೆದ್ದವರಿಗೆ ಮುಂದಿನ ಹಂತದ ಟಿಕೆಟ್ ಬಹು ತೇಕ ಖಾತ್ರಿಯಾಗಲಿರುವುದು ಈ ಪಂದ್ಯದ ವೈಶಿಷ್ಟ್ಯ . ಸದ್ಯ 4 ಪ್ಲೇ ಆಫ್ ಸ್ಥಾನಗಳಿಗಾಗಿ 8 ತಂಡಗಳ ನಡುವೆ ಸ್ಪರ್ಧೆ ಇದೆ.
ಎರಡೂ ತಂಡಗಳು 12 ಪಂದ್ಯ ಗಳನ್ನು ಆಡಿ ಮುಗಿಸಿವೆ. ಮುಂಬೈ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ, ಲಕ್ನೋ 13 ಅಂಕಗಳೊಂದಿಗೆ 4ನೇ ಸ್ಥಾನಿಯಾಗಿದೆ. ದಾಖಲೆ ವಿಚಾರಕ್ಕೆ ಬಂದರೆ ಲಕ್ನೋ ತಂಡದ್ದು ನಿಚ್ಚಳ ಮೇಲುಗೈ. ಅದು ಮುಂಬೈ ವಿರುದ್ಧ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಇದು ಪ್ರಸಕ್ತ ಋತುವಿನಲ್ಲಿ ಇತ್ತಂಡಗಳ ಮೊದಲ ಮುಖಾಮುಖಿ.
ಲಕ್ನೋ ಸ್ಟೇಡಿಯಂ ಲೋ ಸ್ಕೋರಿಂಗ್ ಗೆ ಸಾಕ್ಷಿಯಾಗುತ್ತ ಬಂದಿದೆ. ಸ್ಪಿನ್ನರ್ ಗಳು ಮೇಲುಗೈ ಸಾಧಿಸುತ್ತಿ ದ್ದಾರೆ. ಹೀಗಾಗಿ ಪೀಯೂಷ್ ಚಾವ್ಲಾ, ರವಿ ಬಿಷ್ಣೋಯಿ, ಕೃಣಾಲ್ ಪಾಂಡ್ಯ, ಅಮಿತ್ ಮಿಶ್ರಾ ಮೊದಲಾದವರ ಪಾತ್ರ ನಿರ್ಣಾಯಕವಾಗಲಿದೆ.
ಮುಂಬೈ ಬ್ಯಾಟಿಂಗ್ ಸರ ದಿಯ ಹೆಚ್ಚುಗಾರಿಕೆಯೆಂದರೆ ಸೂರ್ಯ ಕುಮಾರ್ ಯಾದವ್ ಸರಿಯಾದ ಹೊತ್ತಿಗೆ ಫಾರ್ಮ್ ಕಂಡುಕೊಂಡದ್ದು. ಗುಜರಾತ್ ವಿರುದ್ಧ ಶತಕ ಬಾರಿಸಿ ಅಪಾಯಕಾರಿಯಾಗಿ ಗೋಚರಿಸಿ ದ್ದಾರೆ. ಇಶಾನ್ ಕಿಶನ್, ತಿಲಕ್ ವರ್ಮ ಸ್ಥಾನವನ್ನು ಯಶಸ್ವಿಯಾಗಿ ತುಂಬಿದ ನೇಹಲ್ ವಧೇರ, ಟಿಮ್ ಡೇವಿಡ್, ಕ್ಯಾಮರಾನ್ ಗ್ರೀನ್, ವಿಷ್ಣು ವಿನೋದ್ ಅವರಿಂದ ಮುಂಬೈ ಬ್ಯಾಟಿಂಗ್ ಸರದಿ ಬಲಾಡ್ಯವಾಗಿ ಗೋಚರಿಸುತ್ತಿದೆ. ಆದರೆ ನಾಯಕ ರೋಹಿತ್ ಶರ್ಮ ಫಾರ್ಮ್ ನದೇ ಚಿಂತೆಯ ಸಂಗತಿ. ಗುಜರಾತ್ ಎದುರಿನ ಕಳೆದ ಪಂದ್ಯದಲ್ಲಿ ಸಿಡಿದು ನಿಂತರೂ ಇನ್ನಿಂಗ್ಸ್ ಬೆಳೆಸುವಲ್ಲಿ ವಿಫಲರಾಗಿದ್ದರು. ಮುಂಬೈ ಡೆತ್ ಓವರ್ ಬೌಲಿಂಗ್ ಸಮಸ್ಯೆ ಎದುರಿಸುತ್ತಿದೆ. ಆರ್ಚರ್ ಬದಲಿಗೆ ಬಂದ ವೇಗಿ ಕ್ರಿಸ್ ಜೋರ್ಡನ್ ಕೂಡ ಸಾಕಷ್ಟು ರನ್ ಬಿಟ್ಟುಕೊಟ್ಟಿದ್ದಾರೆ.
ನಾಯಕ ಕೆ.ಎಲ್. ರಾಹುಲ್ ಅನುಪಸ್ಥಿತಿಯಲ್ಲಿ ಆಡುತ್ತಿರುವ ಲಕ್ನೋ ಈಗ ಕ್ವಿಂಟನ್ ಡಿ ಕಾಕ್ ಅವರನ್ನು ನೆಚ್ಚಿಕೊಂಡಿದೆ. ವನ್ಡೌನ್ನಲ್ಲಿ ಆಡಲಿಳಿದ ಸೌರಾಷ್ಟ್ರದ ಪ್ರೇರಕ್ ಮಂಕಡ್ ಕಳೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಕೈಲ್ ಮೇಯರ್, ನಿಕೋಲಸ್ ಪೂರಣ್ ಅವರನ್ನು ಪೂರ್ತಿ ನಂಬಿ ಕೊಳ್ಳುವ ಹಾಗಿಲ್ಲ. ಸಿಡಿದರೆ ಪಂದ್ಯದ ಗತಿಯನ್ನೇ ಬದಲಿಸಬಲ್ಲರು. ಇಲ್ಲ ವಾದರೆ ಬೇಗನೇ ಪೆವಿಲಿಯನ್ ಸೇರಿಕೊಂಡು ಉಳಿದವರ ಮೇಲೆ ಒತ್ತಡ ಹೇರುತ್ತಾರೆ. ಮಾರ್ಕಸ್ ಸ್ಟೋಯಿನಿಸ್ ಕೂಡ ಇದೇ ಸಾಲಿಗೆ ಸೇರುವ ಆಟಗಾರ. ಈ ನಿರ್ಣಾಯಕ ಮುಖಾಮುಖಿ ಲಕ್ನೋದಲ್ಲಿ ನಡೆಯುತ್ತಿರುವುದ ರಿಂದ ಕೃಣಾಲ್ ಪಾಂಡ್ಯ ಬಳಗಕ್ಕೆ ಲಾಭವಾದೀತು ಎಂಬ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.