ಈ ಬಾರಿಯ ಐಪಿಎಲ್ ನಲ್ಲಿ ಪ್ರಶಸ್ತಿ ಗೆಲ್ಲುವ ಬಲಿಷ್ಠ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ತನ್ನ ಹೋರಾಟವನ್ನು ಲೀಗ್ ನಲ್ಲಿಯೇ ಕೊನೆಗೊಳಿಸಿತು. ತಂಡದಲ್ಲಿ ಸಾಕಷ್ಟು ಪ್ರತಿಭಾವಂತ ಕ್ರಿಕೆಟಿಗರಿದ್ದರೂ ಈ ಬಾರಿ ಕಪ್ ಗೆಲ್ಲಲು ರಾಜಸ್ಥಾನ್ ಗೆ ಸಾಧ್ಯವಾಗಲಿಲ್ಲ.
ಕಳೆದ ಬಾರಿ ಫೈನಲ್ಗೇರಿದ್ದ ರಾಜಸ್ಥಾನ್ ಈ ಬಾರಿ ಪ್ಲೇ ಆಫ್ ಗೂ ಎಂಟ್ರಿಕೊಡಲಿಲ್ಲ. ಇದಕ್ಕೆ ಪ್ರಮುಖ ಕಾರಣ ವಿದೇಶಿ ಆಟಗಾರರ ವೈಫಲ್ಯ. ಕಳೆದ ಬಾರಿ ಅಬ್ಬರಿಸಿದ್ದ ಬಟ್ಲರ್ ಈ ಬಾರಿ 5 ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ಹೆಟ್ಮಾಯಿರ್ ಕೂಡ ಸದ್ದು ಮಾಡಲಿಲ್ಲ.
ಇದು ಬ್ಯಾಟಿಂಗ್ ವಿಭಾಗದ ಕತೆಯಾದರೆ, ಬೌಲಿಂಗ್ ನಲ್ಲಿ ಬೌಲ್ಟ್ ಉತ್ತಮ ಪ್ರದರ್ಶನ ನೀಡಿದರು. ಆದರೆ ಇಂಜುರಿ ಸಮಸ್ಯೆಗೆ ರಾಜಸ್ಥಾನ್ ಗೆ ದುಬಾರಿಯಾಯಿತು. ಝಂಪಾ ಕೂಡ ಸದ್ದು ಮಾಡಲಿಲ್ಲ. ಈ ನಾಲ್ವರನ್ನು ಹೊರತುಪಡಿಸಿ ರಾಜಸ್ಥಾನ್ ತಂಡದಲ್ಲಿ ಪ್ರಮುಖ ವಿದೇಶಿ ಆಟಗಾರರಿದ್ದರೂ ಅವರಿಗೆ ಹೆಚ್ಚಿನ ಅವಕಾಶ ಸಿಗದೆ, ಅವರು ಬೆಂಚ್ ಕಾದಿದ್ದೆ ಬಂತು. ಅವರಲ್ಲಿ ಪ್ರಮುಖರು ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್.
ಐಪಿಎಲ್ 2023 ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಇಂಗ್ಲೆಂಡ್ ನ ದಿಗ್ಗಜ ಆಟಗಾರ ಜೋ ರೂಟ್ ಅವರನ್ನು ಫ್ರಾಂಚೈಸಿ 1 ಕೋಟಿ ರೂ.ಗೆ ಖರೀದಿಸಿತ್ತು. ಆಸಕ್ತಿ, ಅನುಭವ ಮತ್ತು ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ರೂಟ್ ಅವರಿಗೆ ರಾಜಸ್ಥಾನ ತಂಡ ಹೆಚ್ಚಿನ ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಗಲಿಲ್ಲ.
ಮೊದಲಾರ್ಧದ ಐಪಿಎಲ್ ನಲ್ಲಿ ಆಡುವ ಅವಕಾಶ ಪಡೆಯದ ರೂಟ್ ಐಪಿಎಲ್ ನ ಎರಡನೇ ಹಂತದಲ್ಲಿ 3 ಪಂದ್ಯಗಳಿಗೆ ಆಡುವ ಅವಕಾಶ ಪಡೆದುಕೊಂಡರು. ಈ ಮೂರು ಪಂದ್ಯಗಳಲ್ಲಿ ಅವರಿಗೆ ಒಮ್ಮೆ ಮಾತ್ರ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಅದರಲ್ಲಿ ಅವರು ಕೇವಲ 10 ರನ್ ಮಾತ್ರ ಬಾರಿಸಿದ್ದರು.
ಇನ್ನು ಜೋ ರೂಟ್ ಅವರ ಟಿ20 ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು 32 ಟಿ20 ಪಂದ್ಯಗಳಲ್ಲಿ 35.72 ರ ಸರಾಸರಿಯಲ್ಲಿ 126.31 ರ ಸ್ಟ್ರೈಕ್ ರೇಟ್ ನೊಂದಿಗೆ 893 ರನ್ ಬಾರಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಸೇರಿವೆ. ಬೌಲಿಂಗ್ ನಲ್ಲಿ ರೂಟ್ 6 ವಿಕೆಟ್ ಕೂಡ ಪಡೆದಿದ್ದಾರೆ.