ಬೆಂಗಳೂರು: ಇಂದು ನಡೆಯುವ ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳು ಸೆಣೆಸಾಡಲಿದ್ದು, ಬೆಂಗಳೂರಿನಲ್ಲಿ ಕ್ರಿಕೆಟ್ ಹಬ್ಬದ ಸಡಗರ ಚಿಮ್ಮುತ್ತಿದೆ. ಈ ಹಿನ್ನಲೆಯಲ್ಲಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಪಬ್ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪಂದ್ಯದ ಸಂಭ್ರಮದ ನೆಪದಲ್ಲಿ ರಾತ್ರಿ ಪಬ್‌ಗಳನ್ನು ಅವಧಿಗೆ ಮೀರಿ ಓಪನ್ ಮಾಡಿದರೆ ಎಫ್‌ಐಆರ್ ದಾಖಲಾಗುವುದು.
ಬೆಂಗಳೂರು ನಗರದ ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಹಾಗೂ ಇತರ ಪಬ್ ಕ್ಷೇತ್ರಗಳು ಈಗಾಗಲೇ ಆರ್‌ಸಿಬಿ ಅಭಿಮಾನಿಗಳ ಉತ್ಸಾಹದಿಂದ ಭರ್ತಿಯಾಗಲಿರುವ ಸೂಚನೆ ಇದೆ. ಹಲವು ಪಬ್‌ಗಳು ವಿಡಿಯೋ ವಾಲ್, ಲೈವ್ ಸ್ಕ್ರೀನಿಂಗ್ ಹಾಗೂ ವಿಶೇಷ ಆಯೋಜನೆಗಳ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ರಾತ್ರಿಯ ಮಜಾ ನೀಡಲು ಸಜ್ಜಾಗಿವೆ.
“ಪಂದ್ಯ ತಡವಾದರೂ, ಮ್ಯಾಚ್ ಮುಗಿಯದಿದ್ದರೂ ಪಬ್‌ಗಳು ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ಮುಚ್ಚಬೇಕು” ಎಂದು ಆಯುಕ್ತ ಬಿ. ದಯಾನಂದ್ ತಿಳಿಸಿದರು. ಈ ನಿಯಮವನ್ನು ಉಲ್ಲಂಘಿಸಿ, ಮ್ಯಾಚ್ ಮುಗಿಯದ ನೆಪದಲ್ಲಿ ಪಬ್‌ಗಳು ತಡರಾತ್ರಿ ಓಪನ್ ಇದ್ದರೆ, ಕಾನೂನುಬದ್ಧವಾಗಿ ಎಫ್‌ಐಆರ್ ದಾಖಲಿಸಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ.
ಪೋಲೀಸರು ಸಾರ್ವಜನಿಕರಿಗೆ ಸಹ ಮನವಿ ಮಾಡಿದ್ದು – ಕ್ರಿಕೆಟ್ ಸಂಭ್ರಮದ ವೇಳೆ ಶಿಸ್ತಿನಿಂದ ವರ್ತಿಸಿ, ಸಾರ್ವಜನಿಕ ಸೌಹಾರ್ದತೆ ಮತ್ತು ಶಾಂತಿಯುತ ಸಾಂಸ್ಕೃತಿಕ ಜೀವನವನ್ನು ಕಾಪಾಡಿಕೊಳ್ಳಬೇಕು.














