ಬೆಂಗಳೂರು: ಪಿಎಸ್ ಐ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರಿಗೆ ಕೊನೆಗೂ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಕಳೆದ ಒಂದೂವರೆ ವರ್ಷದಿಂದ ಸೆರೆವಾಸದಲ್ಲಿದ್ದ ಅಮೃತ್ ಪಾಲ್ ಕೊನೆಗೂ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
5 ಲಕ್ಷ ಬಾಂಡ್ ಇಬ್ಬರು ಶ್ಯೂರಿಟಿ ಒದಗಿಸಲು ಆದೇಶ ನೀಡಲಾಗಿದ್ದು ಹಾಗೆ ಯಾವುದೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂದು ಖಡಕ್ ಸೂಚನೆ ನೀಡಲಾಗಿದೆ.
ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು ಕೋರ್ಟ್ ಅನುಮತಿಯಿಲ್ಲದೇ ಪ್ರಯಾಣಿಸುವಂತಿಲ್ಲ ಕೋರ್ಟ್ ಆದೇಶ ನೀಡಿದೆ.
ಪಿಎಸ್ ಐ ನೇಮಕಾತಿಯ ಉಸ್ತುವಾರಿ ವಹಿಸಿದ್ದ ಅಮೃತ್ ಪಾಲ್, ಸೇಫ್ ಲಾಕರ್ ನ ಕೀ ಅಮೃತ್ ಪಾಲ್ ಬಳಿಯಿತ್ತು. ಕಿರಿಯ ಅಧಿಕಾರಿಗಳಿಗೆ ಕೀ ಕೊಟ್ಟು ದುರುಪಯೋಗ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಈಗ ಆ ತನಿಖಾಧಿಕಾರಿಗಳಿಗೆ ಬೆದರಿಕೆ ಹಾಕದಂತೆ ಷರತ್ತು ವಿಧಿಸಲು ಎಸ್ ಪಿಪಿ ಪ್ರಸನ್ನ ಕುಮಾರ್ ರಿಂದ ಹೈಕೋರ್ಟ್ ಗೆ ಮನವಿ ಮಾಡಲಾಗಿತ್ತು. ಅದರಂತೆ ತನಿಖಾಧಿಕಾರಿಗಳಿಗೆ ಬೆದರಿಕೆ ಹಾಕದಂತೆ ಷರತ್ತು ಕೋರ್ಟ್ ವಿಧಿಸಿದೆ.
ಘಟನೆ ಹಿನ್ನೆಲೆ
545 ಪಿಎಸ್ ಐಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯು ಅಕ್ಟೋಬರ್ 3, 2021 ರಂದು 92 ಕೇಂದ್ರಗಳಲ್ಲಿ ನಡೆಯಿತು. ಒಟ್ಟು 54,289 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದ 52 ಅಭ್ಯರ್ಥಿಗಳು ಸೇರಿದಂತೆ ಹಗರಣಕ್ಕೆ ಸಂಬಂಧಿಸಿದಂತೆ 110 ಜನರನ್ನು ಬಂಧಿಸಲಾಗಿದೆ.ಈ 52 ಅಭ್ಯರ್ಥಿಗಳು ಯಾವುದೇ ಪೊಲೀಸ್ ನೇಮಕಾತಿಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರನ್ನು ಪರೀಕ್ಷೆಯಲ್ಲಿ ರಿಗ್ಲಿಂಗ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು.