ಟೆಹ್ರಾನ್ : ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತದ ಧ್ವಜವನ್ನು ಹೊಂದಿರುವ ಎರಡು ದ್ರವೀಕೃತ ಪೆಟ್ರೋಲಿಯಂ ಅನಿಲ ಟ್ಯಾಂಕರ್‌ಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ತಯಾರಿ ನಡೆಸುತ್ತಿವೆ ಎಂದು ವರದಿಯಾಗಿದೆ. ಹಾರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯ ನಡುವಿನ ಕಾರ್ಯತಂತ್ರದ ಕಿರಿದಾದ ಸಮುದ್ರ ಮಾರ್ಗ. ವಿಶ್ವದ ಕಚ್ಚಾ ತೈಲ ಪೂರೈಕೆಯ ಸುಮಾರು 20-25% ಇದರ ಮೂಲಕ ಹಾದುಹೋಗುತ್ತದೆ.
ಫೆಬ್ರವರಿ 28 ರಂದು ಯುದ್ಧ ಪ್ರಾರಂಭವಾದಾಗಿನಿಂದ ಇರಾನ್ ಮತ್ತು ಓಮನ್ ನಡುವಿನ ಕಿರಿದಾದ ಸಮುದ್ರ ಮಾರ್ಗದಲ್ಲಿ ನೂರಾರು ಹಡಗುಗಳು ಸಿಲುಕಿಕೊಂಡಿದ್ದವು. ಭಾರತದ ರಾಜತಾಂತ್ರಿಕ ಸಂಪರ್ಕದ ನಂತರ, ಎರಡು ಭಾರತೀಯ ಹಡಗುಗಳಾದ ಶಿವಾಲಿಕ್ ಮತ್ತು ನಂದಾ ದೇವಿ ಸುರಕ್ಷಿತವಾಗಿ ಜಲಸಂಧಿಯನ್ನು ದಾಟಿ ಗುಜರಾತ್ ತಲುಪಿವೆ. ಗಲ್ಫ್ ಸಮುದ್ರದಲ್ಲಿ ಲಂಗರು ಹಾಕಲಾಗಿರುವ ಇನ್ನೂ ಎರಡು ಭಾರತೀಯ ಟ್ಯಾಂಕರ್‌ಗಳು ಶೀಘ್ರದಲ್ಲೇ ಹಾರ್ಮುಜ್ ಜಲಸಂಧಿಯನ್ನು ದಾಟುವ ಸಾಧ್ಯತೆಯಿದೆ.
ಗಲ್ಫ್‌ನೊಳಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಕೇಂದ್ರವಾದ ಶಾರ್ಜಾ ಬಳಿ ಲಂಗರು ಹಾಕಲಾಗಿರುವ ಭಾರತೀಯ ಧ್ವಜ ಹೊತ್ತ ಎಲ್‌ಪಿಜಿ ಟ್ಯಾಂಕರ್‌ಗಳಾದ ಪೈನ್ ಗ್ಯಾಸ್ ಮತ್ತು ಜಗ್ ವಸಂತ್ ಪ್ರಯಾಣಕ್ಕೆ ಸಿದ್ಧತೆ ನಡೆಸುತ್ತಿವೆ. ಎರಡು ಎಲ್‌ಪಿಜಿ ಟ್ಯಾಂಕರ್‌ಗಳು ಶನಿವಾರ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಜಗ್ ವಸಂತ್ ಅನ್ನು ಬಿಪಿಸಿಎಲ್ ಮತ್ತು ಪೈನ್ ಗ್ಯಾಸ್ ಅನ್ನು ಐಒಸಿ ಚಾರ್ಟರ್ಡ್ ಮಾಡಿವೆ ಎಂದು ತಿಳಿದುಬಂದಿದೆ.
ಶುಕ್ರವಾರ ಹಡಗುಗಳು ನೌಕಾಯಾನಕ್ಕೆ ಸಿದ್ಧವಾಗುತ್ತಿವೆಯೇ ಎಂದು ಕೇಳಿದಾಗ, ಭಾರತದ ಫೆಡರಲ್ ಶಿಪ್ಪಿಂಗ್ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ, ತಕ್ಷಣದ ವಿವರಗಳು ಲಭ್ಯವಿಲ್ಲ ಎಂದರು. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಗಲ್ಫ್ ಒಳಗಿರುವ ಭಾರತದ 22 ಹಡಗುಗಳ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಸಂಚಾರಕ್ಕೆ ದೇಶದ ಪ್ರಯತ್ನ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಇತರ ನಾಯಕರೊಂದಿಗೆ ಅವುಗಳ ಸುರಕ್ಷಿತ ಸಾಗಣೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.















