ನವದೆಹಲಿ : ಭಾರತೀಯ ರೈಲ್ವೇ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ಟಿಕೆಟ್ ದಲ್ಲಾಳಿಗಳನ್ನು ತಡೆಯಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇನ್ಮುಂದೆ ಐಆರ್‌ಸಿಟಿಸಿ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದಲ್ಲಿ, ರೈಲ್ವೇ ಟಿಕೆಟ್ ಕಾಯ್ದಿರಿಸಲು ಸಮಸ್ಯೆಯಾಗಲಿದೆ.
ಈ ನಿಯಮವನ್ನು ಮೂರು ಹಂತಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಮೊದಲ ಹಂತ 2025ರ ಡಿ.29ರಂದು ಜಾರಿಯಾಗಿತ್ತು. ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಕೇವಲ ಆಧಾರ್ ಲಿಂಕ್ ಮಾಡಿದ ಖಾತೆಗಳಿಂದಲೇ ಬುಕಿಂಗ್ ಮಾಡಲು ಸಾಧ್ಯ. ಲಿಂಕ್ ಇಲ್ಲದವರು ಮಧ್ಯಾಹ್ನ 12 ಗಂಟೆ ನಂತರ ಬುಕ್ ಮಾಡಬಹುದಾಗಿದೆ.
ಎರಡನೇ ಹಂತ ಇಂದಿನಿಂದ (ಜ.5) ಜಾರಿಯಾಗಿದ್ದು, ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕೇವಲ ಆಧಾರ್ ಲಿಂಕ್ ಆಗಿರುವ ಖಾತೆಗಳಿಂದ ಮಾತ್ರ ಬುಕಿಂಗ್ ಮಾಡಲು ಸಾಧ್ಯತೆಯಿದೆ. ಲಿಂಕ್ ಇಲ್ಲದವರು ಸಂಜೆ 4 ಗಂಟೆ ನಂತರ ಮಾತ್ರ ಬುಕ್ ಮಾಡಬಹುದು. ಮೂರನೇ ಹಂತ ಜ.12ರಿಂದ ಜಾರಿಯಾಗಲಿದೆ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ (ಅಂದರೆ ಇಡೀ ದಿನ) ಕೇವಲ ಆಧಾರ್ ಲಿಂಕ್ ಮಾಡಿದ ಖಾತೆಗಳಿಂದಲೇ ಆನ್‌ಲೈನ್ ಬುಕಿಂಗ್ ಮಾಡಲು ಅವಕಾಶವಿರುತ್ತದೆ.
ಈ ನಿಯಮ ಕೇವಲ ಆನ್‌ಲೈನ್ ಬುಕಿಂಗ್‌ಗೆ ಅಂದರೆ ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಆಪ್‌ಗೆ ಅನ್ವಯಿಸುತ್ತದೆ. ರೈಲು ನಿಲ್ದಾಣದ ಕೌಂಟರ್‌ಗಳಲ್ಲಿ ಟಿಕೆಟ್ ಖರೀದಿಸುವುದಕ್ಕೆ ಯಾವುದೇ ಬದಲಾವಣೆ ಇಲ್ಲ. ಟಿಕೆಟ್ ದಲ್ಲಾಳಿಗಳು ಮತ್ತು ಫೇಕ್ ಖಾತೆಗಳ ಮೂಲಕ ಬೃಹತ್ ಬುಕಿಂಗ್ ಮಾಡುವುದನ್ನು ತಡೆಯಬಹುದು. ಹೀಗಾಗಿ ಇದರಿಂದ ನಿಜವಾದ ಪ್ರಯಾಣಿಕರಿಗೆ ಕನ್ಫರ್ಮ್ ಟಿಕೆಟ್ ಪಡೆಯುವ ಅವಕಾಶ ಹೆಚ್ಚಾಗುತ್ತದೆ.
ಐಆರ್‌ಸಿಟಿ ವೆಬ್‌ಸೈಟ್ ಅಥವಾ ಆಪ್‌ನಲ್ಲಿ ಲಾಗಿನ್ ಆಗಿ, ʼMy Profileʼ ವಿಭಾಗದಲ್ಲಿ Aadhaar KYC’ ಆಯ್ಕೆಯನ್ನು ಆರಿಸಿ, ಆಧಾರ್ ಸಂಖ್ಯೆ ನಮೂದಿಸಿ, ಆಧಾರ್‌ಗೆ ಲಿಂಕ್ ಆದ ಮೊಬೈಲ್‌ಗೆ ಬರುವ OTPಯೊಂದಿಗೆ ಪರಿಶೀಲನೆ ಪೂರ್ಣಗೊಳಿಸಿ. ಪ್ರಯಾಣಿಕರು ಶೀಘ್ರದಲ್ಲೇ ತಮ್ಮ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡಿಕೊಳ್ಳುವಂತೆ ರೈಲ್ವೇ ಸಲಹೆ ನೀಡಿದೆ. ಇದರಿಂದ ಟಿಕೆಟ್ ಬುಕಿಂಗ್ ಸುಲಭ ಮತ್ತು ಸುರಕ್ಷಿತವಾಗಲಿದೆ.















