ಮನೆ ಅಪರಾಧ ಮೈಸೂರು & ಚಾ.ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ನೇರ ನೇಮಕಾತಿ ಅಕ್ರಮ: ದೂರು...

ಮೈಸೂರು & ಚಾ.ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ನೇರ ನೇಮಕಾತಿ ಅಕ್ರಮ: ದೂರು ದಾಖಲು

0

ಮೈಸೂರು(Mysuru): ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಮಾಡಿಕೊಳ್ಳಲಾಗಿರುವ ೨೦೧೭-೧೮ನೇ ಸಾಲಿನ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂಸಿಡಿಸಿಸಿ ಬ್ಯಾಂಕ್‌ನ ಅಂದಿನ ಅಧ್ಯಕ್ಷ ಎಸ್.ಚಂದ್ರಶೇಖರ್, ಉಪಾಧ್ಯಕ್ಷ ಎನ್.ಮಹದೇವಪ್ಪ, ಸಹಕಾರ ಸಂಘಗಳ ನಿಬಂಧಕರ ಪ್ರತಿನಿಧಿ ಶ್ರೀಧರ್, ಸಹಕಾರ ಸಂಘಗಳ ಅಪರ ನಿಬಂಧಕ ಯಧುನಾಥ್(ನಿವೃತ್ತ), ಮುಖ್ಯ ನಿರ್ವಾಹಣ ಅಧಿಕಾರಿ ಬಿ.ನಾಗರಾಜ್, ಹಿರಿಯ ವ್ಯವಸ್ಥಾಪಕ ಎಂ.ಹಿರಿಯಣ್ಣ, ಸಹಾಯಕ ವ್ಯವಸ್ಥಾಪಕ ಎ.ಎಲ್.ರಾಜುಕುಮಾರ್, ಹಿರಿಯ ಸಹಾಯಕರಾದ ಜಿ.ಗೋಪಾಲಕೃಷ್ಣ, ಎಲ್.ರಾಜಕುಮಾರ್, ಸಹಾಯಕ ವ್ಯವಸ್ಥಾಪಕ ಎನ್.ಜಗದೀಶ್, ಹಿರಿಯ ಸಹಾಯಕ ಎಚ್.ಎನ್.ರವಿ, ಹಿರಿಯ ಸಹಾಯಕ ಎಸ್.ಜಯೇಂದ್ರ ಇವರ ವಿರುದ್ಧ ದೂರು ದಾಖಲಾಗಿದೆ.

ದೂರಿನ ಸಾರಾಂಶ: ೨೦೧೭-೧೮ನೇ ಸಾಲಿನಲ್ಲಿ ನಡೆಸಿದ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ, ಕಾನೂನು ಸಲಹೆಗಾರ, ಹಿರಿಯ ಸಹಾಯಕ, ಕಿರಿಯ ಸಹಾಯಕ ಮತ್ತು ಗುಮಾಸ್ತ ಹುದ್ದೆಗಳಿಗೆ ನೇಮಕಾತಿ ನಡೆದಿತ್ತು. ಅಂದಿನ ಅಧ್ಯಕ್ಷರು, ಉಪಾಧ್ಯಾಕ್ಷರು, ಸದಸ್ಯರು ಹಾಗೂ ನೇಮಕಾತಿ ಸಮಿತಿಯ ಸದಸ್ಯರಿಂದ ನೇಮಿಸಲ್ಪಟ್ಟ ಅಂದಿನ ಉಪ ಸಮಿತಿಯ ಸದಸ್ಯರು ಅಭ್ಯರ್ಥಿಗಳನ್ನು ನೇಮಕಾತಿ ಮಾಡುವ ಸಮಯದಲ್ಲಿ ಮತ್ತು ನೇಮಕಾತಿ ಪೂರ್ವದಲ್ಲಿ ಸರ್ಕಾರದ ನೇಮಕಾತಿ ಆದೇಶಗಳನ್ನು ಪಾಲಿಸಿಲ್ಲ. ಮೀಸಲಿರುವ ಹುದ್ದೆಗಳನ್ನು ನಿಯಮಾನುಸಾರವಾಗಿ ನೇಮಕಾತಿ ಪ್ರಕ್ರಿಯೆಯನ್ನು ನಡಸದೆ ಮತ್ತು ಅಭ್ಯರ್ಥಿಗಳ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳನ್ನು ಪರಿಗಣಿಸದೆ ಸಂಸ್ಥೆಯವರು ಅಭ್ಯರ್ಥಿಗಳಿಂದ ಹಣ ಪಡೆದುಕೊಂಡು ನೇಮಕಾತಿ ಪೂರ್ವದ ಸರ್ಕಾರದ ಆದೇಶಗಳನ್ನು ಪಾಲಿಸದೇ ಲಂಚ ಪಡೆದು ದಾಖಲಾತಿಗಳನ್ನು ನಕಲು ಮಾಡಿ, ತಿದ್ದುಪಡಿ ಮಾಡಿ ಒಳಸಂಚು ರೂಪಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು ಸರ್ಕಾರಕ್ಕೆ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಮೋಸ ಮಾಡಿರುವ ಅಧ್ಯಕ್ಷರು, ಉಪಾಧ್ಯಾಕ್ಷರು, ಸದಸ್ಯರು ಹಾಗೂ ನೇಮಕಾತಿ ಸಮತಿಯ ಸದಸ್ಯರಿಂದ ನೇಮಿಸಲ್ಪಟ್ಟ ಅಂದಿನ ಉಪ ಸಮಿತಿಯ ಸದಸ್ಯರು ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೊಂದ ಅಭ್ಯರ್ಥಿ ಆರ್.ಮಹೇಶ್ ದೂರು ದಾಖಲಿಸಿದ್ದಾರೆ.