ಮನೆ ಕಾನೂನು ಪಿಪಿಇ ಕಿಟ್‌ ಪೂರೈಕೆಯಲ್ಲಿ ಅಕ್ರಮ: ಕೋವಿಡ್‌ ಹಗರಣದ ತನಿಖಾ ವರದಿ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ ಗೆ...

ಪಿಪಿಇ ಕಿಟ್‌ ಪೂರೈಕೆಯಲ್ಲಿ ಅಕ್ರಮ: ಕೋವಿಡ್‌ ಹಗರಣದ ತನಿಖಾ ವರದಿ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ ಗೆ ಸಲ್ಲಿಕೆ

0

ಕೋವಿಡ್‌ ಸಂದರ್ಭದಲ್ಲಿ ಪಿಪಿಇ ಕಿಟ್‌ ಸೇರಿದಂತೆ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸಿರುವುದಕ್ಕೆ ₹76,51,35,000 ಮೊತ್ತವನ್ನು ಪ್ರೂಡೆಂಟ್‌ ಮ್ಯಾನೇಜ್‌ಮೆಂಟ್‌ ಸಲ್ಯೂಷನ್ಸ್‌ ಮತ್ತು ಲಾಜ್‌ ಎಕ್ಸ್‌ಪೋರ್ಟ್ಸ್‌ಗೆ ಪಾವತಿಸಲು ನಿರ್ದೇಶಿಸಿದ್ದ ಏಕಸದಸ್ಯ ಪೀಠ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Join Our Whatsapp Group

“ಮೇಲ್ಮನವಿ ತಿದ್ದುಪಡಿ ಮಾಡಲು ಹಾಗೂ ಕೋವಿಡ್‌ ಹಗರಣದ ತನಿಖಾ ವರದಿ ಒಳಗೊಂಡು ಹೆಚ್ಚುವರಿ ದಾಖಲೆ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಕೆ ಮಾಡಿರುವ ಮಧ್ಯಂತರ ಅರ್ಜಿಗಳನ್ನು ಪುರಸ್ಕರಿಸಿಲಾಗಿದೆ. ಪಿಪಿಟ್‌ ಕಿಟ್‌ ಪೂರೈಕೆ ಸಂಬಂಧ ನಡೆದಿರುವ ಅಕ್ರಮ ಕುರಿತು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಕುನ್ಹಾ ನೇತೃತ್ವದ ಸಮಿತಿ ಸಲ್ಲಿಸಿರುವ ತನಿಖಾ ವರದಿಯ ಭಾಗವನ್ನು ರಾಜ್ಯ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ. ಇದರ ಪ್ರತಿಯನ್ನು ನಾಳೆಯೊಳಗೆ ಪ್ರೂಡೆಂಟ್‌ ಮ್ಯಾನೇಜ್‌ಮೆಂಟ್‌ ಸಲ್ಯೂಷನ್ಸ್‌ ಮತ್ತು ಲಾಜ್‌ ಎಕ್ಸ್‌ಪೋರ್ಟ್ಸ್‌ಗೆ ನೀಡಬೇಕು. ಇದನ್ನು ಆಧರಿಸಿ ಮುಂದಿನ ವಿಚಾರಣೆ ವೇಳೆಗೆ ಪ್ರತಿವಾದಿ ಕಂಪನಿ ಪರ ವಕೀಲರು ವಾದಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ರೊಬೆನ್‌ ಜಾಕಬ್‌ ಅವರು “ಕೋವಿಡ್‌ ಮೊದಲನೇ ಅಲೆಯ ಸಂದರ್ಭದಲ್ಲಿ ಪ್ರತಿ ಪಿಪಿಇ ಕಿಟ್‌ಗೆ ₹1,312 ದರ ವಿಧಿಸಲಾಗಿತ್ತು. ಎರಡನೇ ಅವಧಿಯ ವೇಳೆಗೆ ಪಿಪಿಇ ಕಿಟ್‌ ಬೆಲೆ ಮಾರುಕಟ್ಟೆಯಲ್ಲಿ ₹400 ಇದ್ದರೂ ₹1,312 ದರ ವಿಧಿಸಲಾಗಿದೆ. ಇದರ ಪ್ರಕಾರ ಪ್ರತಿವಾದಿ ಕಂಪನಿಗೆ ₹23 ಕೋಟಿ ಪಾವತಿಸಬೇಕಿದೆ. ಆದರೆ, ಪ್ರೂಡೆಂಟ್‌ ಮ್ಯಾನೇಜ್‌ಮೆಂಟ್‌ ಸಲ್ಯೂಷನ್ಸ್‌ ಮತ್ತು ಲಾಜ್‌ ಎಕ್ಸ್‌ಪೋರ್ಟ್ಸ್‌ ₹76 ಕೋಟಿ ಶುಲ್ಕ ವಿಧಿಸುವ ಮೂಲಕ ಅಕ್ರಮ ಎಸಗಿದ್ದಾರೆ” ಎಂದರು.

ಪ್ರತಿವಾದಿ ಪ್ರೂಡೆಂಟ್‌ ಸಲ್ಯೂಷನ್ಸ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ತನಿಖಾ ವರದಿಯನ್ನು ನಮಗೆ ನೀಡಿಲ್ಲ. ಅದನ್ನು ನೀಡಿದರೆ ಪರಿಶೀಲಿಸಿ ವಾದ ಮಂಡಿಸಲಾಗುವುದು” ಎಂದರು.

ಇದನ್ನು ಪರಿಗಣಿಸಿದ ಪೀಠವು ತನಿಖಾ ವರದಿಯನ್ನು ಪ್ರತಿವಾದಿಗಳಿಗೆ ನಾಳೆಯೊಳಗೆ ನೀಡಬೇಕು. ಅದನ್ನು ಪರಿಶೀಲಿಸಿ ಅವರು ವಾದಿಸಬೇಕು ಎಂದು ಆದೇಶಿಸಿ, ವಿಚಾರಣೆಯನ್ನು ಮಾಚ್೯ 3ಕ್ಕೆ ಮುಂದೂಡಿತು.