ಮನೆ ರಾಜ್ಯ ವಾಲ್ಮೀಕಿ ನಿಗಮದಲ್ಲಿ ಅಕ್ರಮ: ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಗಡೆ – ಎಚ್‌.ಸಿ. ಮಹದೇವಪ್ಪ

ವಾಲ್ಮೀಕಿ ನಿಗಮದಲ್ಲಿ ಅಕ್ರಮ: ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಗಡೆ – ಎಚ್‌.ಸಿ. ಮಹದೇವಪ್ಪ

0

ಬೆಂಗಳೂರು:  ವಾಲ್ಮೀಕಿ ಪರಿಶಿಷ್ಟ ಪಂಡಗಳ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್  ಅವರ ಆತ್ಮಹತ್ಯೆಯಿಂದ ತುಂಬ ನೋವಾಗಿದೆ. ಮರಣಪತ್ರದಲ್ಲಿ ಅವರು ಕೆಲವು ಆರೋಪಗಳನ್ನು ಮಾಡಿದ್ದಾರೆ. ತಕ್ಷಣವೆ ಸರ್ಕಾರ  ತನಿಖೆ ಆರಂಭಿಸಿದೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಗಡೆ ಬರಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಹೇಳಿದರು.

Join Our Whatsapp Group

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಲ್ಲಿ ದಲಿತರು, ದಲಿತೇತರ ಹಣ ಎಂದಲ್ಲ. ಅದು ಸರ್ಕಾರದ ಹಣ. ಅಂತೆ ಕಂತೆಗಳ ಮೇಲೆ ಮಾತನಾಡಲು ಆಗುವುದಿಲ್ಲ. ಪ್ರಕರಣವನ್ನು ರಾಜಕೀಯಕರಣಗೊಳಿಸಿದ ತಕ್ಷಣ ಮಾತನಾಡಲು ಆಗುವುದಿಲ್ಲ. ಕೆ.ಎಸ್. ಈಶ್ವರಪ್ಪ ಪ್ರಕರಣವೇ ಬೇರೆ, ನಿಗಮದ ಹಣ ವರ್ಗಾವಣೆ ಪ್ರಕರಣವೇ ಬೇರೆ. ಅದಕ್ಕೂ ಇದಕ್ಕೂ ಹೋಲಿಕೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ವಿರೋಧ ಪಕ್ಷ ಆಗಿರುವರಿಂದ, ಆ ಪಕ್ಷದವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಸತ್ಯಾಸತ್ಯತೆ ಹೊರಗಡೆ ಬಾರದೆ ಯಾವ ತೀರ್ಮಾನ ಮಾಡಲಾಗುತ್ತದೆ ಎಂದರು.

ಕಾಂಗ್ರೆಸ್ ಕಚೇರಿಗೆ ಸಚಿವರು ಹೋಗಬೇಕು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಪಕ್ಷ ಸಂಘಟನೆ ಮಾಡಬೇಕು. ಪಕ್ಷದ ಅಧ್ಯಕ್ಷರಾಗಿ ಅವರು ಆ ಮಾತು ಹೇಳಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಕೆಲಸವನ್ನು ಹೇಳಿಸಿಕೊಂಡು ಮಾಡುವುದಲ್ಲ. ಅದು ನಮ್ಮ ಕರ್ತವ್ಯ ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದನ್ನು ಎಐಸಿಸಿ ತೀರ್ಮಾನಿಸಲಿದೆ ಎಂದರು.

ಕೆಪಿಸಿಸಿ ಅಧ್ಯಕ್ಷನಾಗಬೇಕೆಂದು ಕೆ.ಎನ್‌. ರಾಜಣ್ಣ ಬಯಕೆ ವ್ಯಕ್ತಪಡಿಸಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಅಧ್ಯಕ್ಷರಾಗಲು ಎಲ್ಲರಿಗೂ ಮುಕ್ತ ಅವಕಾಶಗಳಿವೆ. ಅದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ಯಾವ ಸಂದರ್ಭದಲ್ಲಿ ಏನೇನು ತೀರ್ಮಾನವನ್ನು ಹೇಳಿದ್ದರೋ ಅದನ್ನು ಪರಾಮರ್ಶೆ ಮಾಡುವ ಅಧಿಕಾರ ಇರುವುದು ಹೈಕಮಾಂಡ್‌ಗೆ ಮಾತ್ರ. ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಮಾಡಲಿದೆ ಎಂದರು.

ಹಿಂದಿನ ಲೇಖನವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ: ಬಿ ವೈ ವಿಜಯೇಂದ್ರ
ಮುಂದಿನ ಲೇಖನಪಕ್ಷಪಾತದ ಆರೋಪ ಬಂದಾಗ ನ್ಯಾಯಾಧೀಶರ ಪ್ರತಿಕ್ರಿಯೆ ಆಲಿಸದೆ ಅವರಿಂದ ಪ್ರಕರಣ ವರ್ಗಾಯಿಸುವಂತಿಲ್ಲ: ದೆಹಲಿ ಹೈಕೋರ್ಟ್