ಮನೆ ರಾಜ್ಯ ಜಗದೀಶ್ ಶೆಟ್ಟರ್ ಮತಕ್ಕಾಗಿ ಸ್ವಾಭಿಮಾನ ಮಾರಿಕೊಳ್ಳುತ್ತಿದ್ದಾರೆಯೇ: ಕೆ.ಎಸ್.ಈಶ್ವರಪ್ಪ ಪ್ರಶ್ನೆ

ಜಗದೀಶ್ ಶೆಟ್ಟರ್ ಮತಕ್ಕಾಗಿ ಸ್ವಾಭಿಮಾನ ಮಾರಿಕೊಳ್ಳುತ್ತಿದ್ದಾರೆಯೇ: ಕೆ.ಎಸ್.ಈಶ್ವರಪ್ಪ ಪ್ರಶ್ನೆ

0

ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಅವರು ಮತಕ್ಕಾಗಿ ಸ್ವಾಭಿಮಾನವನ್ನು ಮಾರಿಕೊಳ್ಳುತ್ತಿದ್ದಾರೆಯೇ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

Join Our Whatsapp Group

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್’ಎಸ್ ಎಸ್ ಮಹತ್ವ ಅರಿತುಕೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷದ ಬಜರಂಗದಳ ನಿಷೇಧಿಸುವ ಪ್ರಣಾಳಿಕೆಯನ್ನಿಟ್ಟುಕೊಂಡು ಹೇಗೆ ಜನರ ಮುಂದೆ ಹೋಗುತ್ತಾರೆ. ಅವರ ಸ್ವಾಭಿಮಾನ ಎಲ್ಲಿ ಹೋಯ್ತು? ಇದೀಗ ಜಗದೀಶ್ ಶೆಟ್ಟರ್ ಅವರಿಗೆ ಸ್ವಾಭಿಮಾನದ ಪ್ರಶ್ನೆ ಉದ್ಭವವಾಗಿದ್ದು, ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧ ಮಾಡುವ ಘೋಷಣೆ ಮಾಡಿ ಮುಸ್ಲಿಂ ಸಮುದಾಯವನ್ನು ತೃಪ್ತಿಪಡಿಸುವ ಕೆಲಸಕ್ಕೆ ಮುಂದಾಗಿದೆ. ಭಜರಂಗದಳ ನಿಷೇಧ ಮಾಡಿ ಕಾಂಗ್ರೆಸ್ ಹಿಂದೂ ಸಮಾಜವನ್ನು ಅಪಮಾನ ಮಾಡಲು ಹೊರಟಿದೆ. ಇದನ್ನು ನೋಡಿದರೇ ಕೋಮುವಾದಿ ಕಾಂಗ್ರೆಸ್ ನೇರವಾಗಿ ಜಾತಿಗೆ ಬೆಂಬಲ ನೀಡುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಇದೇ ಕಾಂಗ್ರೆಸ್ ನ ನೀತಿಯಾಗಿದೆ ಎಂದು ಕೆಎಸ್ ಈಶ್ವರಪ್ಪ ಹರಿಹಾಯ್ದರು.

ಕಾಂಗ್ರೆಸ್ ಬಜರಂಗದಳವನ್ನು ಏಕೆ ನಿಷೇಧ ಮಾಡಬೇಕು ಎಂಬುದೇ ಅವರಲ್ಲಿಯೇ ಗೊಂದಲದ ಗೂಡಾಗಿದೆ. ದೇಶದ ರಕ್ಷಣೆ, ರಾಷ್ಟ್ರ ಭಕ್ತಿ ಮಾಡುವ ಸಂಘಟನೆ ಭಜರಂಗದಳ ಆಗಿದೆ. ಇಂತಹ ಸಂಘಟನೆಯನ್ನು ದೇಶ ವಿರೋಧಿ ಚಟುವಟಿಕೆ ನಡೆಸುವ ಪಿಎಫ್’ಐ ಜೊತೆಗೆ ಹೋಲಿಕೆ ಮಾಡಿ ನಿಷೇಧ ಮಾಡಲು ಹೊರಟಿರುವ ನೀತಿಯೇ ದುರಂತವಾಗಿದೆ. ಈ ಹಿನ್ನೆಲೆ ಯುವಕರು ನೇರವಾಗಿ ಹೋರಾಟಕ್ಕೆ ಇಳಿಯುವ ಮುಂಚೆಯೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧವನ್ನು ವಾಪಸ್ ಪಡೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೇ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮೇಲೆ ಈವರೆಗೆ ಗೌರವವಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪ ಎಂದು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಅಲ್ಲದೇ ಪ್ರಿಯಾಂಕಾ ಖರ್ಗೇ ಮೋದಿಯವರನ್ನು ನಾಲಾಯಕ್ ಎಂದು ಕರೆದಿದ್ದಾರೆ. ಇದು ಆನೆ ಮುಂದೆ ತಿಗಣಿ ಇದ್ದ ಹಾಗೇ. ಹೀಗಾಗಿಯೇ ಇನ್ನಷ್ಟು ಕಾಂಗ್ರೆಸ್ ಪಕ್ಷ ಹಾಳಾಗಲಿ ಎಂಬುದು ಅವರ ಉದ್ದೇಶವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಡಿಕೆ ಬದಲು ಕೆಡಿ ಅಂತಾ ಇಟ್ಟುಕೊಂಡಿದ್ದರೆ ಚೆನ್ನಾಗಿತ್ತು ಎಂದು ಲೇವಡಿ ಮಾಡಿದರು.