ಮನೆ ರಾಜ್ಯ ಸತ್ತವರ ಬಗ್ಗೆ ಕುಮಾರಸ್ವಾಮಿಗೆ ಇರೋದು ಅನುಕಂಪನಾ ಅಥವಾ ರಾಜಕೀಯನಾ? : ಡಿಕೆ ಸುರೇಶ್ ತಿರುಗೇಟು

ಸತ್ತವರ ಬಗ್ಗೆ ಕುಮಾರಸ್ವಾಮಿಗೆ ಇರೋದು ಅನುಕಂಪನಾ ಅಥವಾ ರಾಜಕೀಯನಾ? : ಡಿಕೆ ಸುರೇಶ್ ತಿರುಗೇಟು

0

ರಾಮನಗರ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದಾರೆ ಮಾಜಿ ಸಂಸದ ಡಿ.ಕೆ. ಸುರೇಶ್. ತಮ್ಮ ಸಹೋದರ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ‘ಡ್ರಾಮಾ ಕಣ್ಣೀರು’ ಎಂದ ಕುಮಾರಸ್ವಾಮಿ ಹೇಳಿಕೆಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಸುರೇಶ್, ಡ್ರಾಮಾ ಮಾಡೋದ್ರಲ್ಲಿ ಕುಮಾರಸ್ವಾಮಿ ಎಕ್ಸ್‌ಪರ್ಟ್. ಅವರು ಯಾವಾಗ ಯಾವ ರೀತಿಯ ರಾಜಕೀಯ ಮಾಡಬೇಕು ಎಂಬುದರಲ್ಲೂ ಪರಿಣತಿ ಹೊಂದಿದ್ದಾರೆ. ಸತ್ತವರ ಬಗ್ಗೆ ಅವರಿಗೆ ನಿಜಕ್ಕೂ ಸಹಾನುಭೂತಿ ಇದೆಯೋ ಅಥವಾ ಇದು ರಾಜಕೀಯದ ಭಾಗವೋ ಎಂದು ಪ್ರಶ್ನಿಸುತ್ತಾ, ಆಕ್ರೋಶ ವ್ಯಕ್ತಪಡಿಸಿದರು.

“ಕಾಲ್ತುಳಿತ ಸಂಭವಿಸಿದ ವೇಳೆ ಡಿಸಿಎಂ ಡಿಕೆಶಿ ವಿಧಾನಸೌಧದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಘಟನೆ ತಿಳಿಯುತ್ತಿದ್ದಂತೆ ತಕ್ಷಣ ಚಿನ್ನಸ್ವಾಮಿ ಸ್ಟೇಡಿಯಂ ತೆರಳಿದ್ರು. ಅವರು ವೇದಿಕೆ ಕಾರ್ಯಕ್ರಮವನ್ನು 10 ನಿಮಿಷಗಳಲ್ಲಿ ಮುಗಿಸಲು ಕ್ರಮ ತೆಗೆದುಕೊಂಡರು. ಆದರೆ ಈ ಸಮಯದಲ್ಲೂ ಡಿಕೆಶಿಯನ್ನು ಟಾರ್ಗೆಟ್ ಮಾಡುವ ರಾಜಕೀಯ ನಡೆಯುತ್ತಿದೆ” ಎಂದು ಅವರು ಕಿಡಿಕಾರಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ‘ಸಿಎಂ ಎ1, ಡಿಸಿಎಂ ಎ2’ ಹೇಳಿಕೆಗೆ ತಿರುಗೇಟು ನೀಡಿದ ಸುರೇಶ್, “ವಿಜಯೇಂದ್ರ ಮೊದಲು ಮೋದಿ ಮತ್ತು ಅಮಿತ್ ಶಾ ಅವರನ್ನು ಪ್ರಯಾಗ್‌ರಾಜ್ ಘಟನೆಯ ಎ1, ಎ2 ಆಗಿ ಘೋಷಿಸಲಿ. ಆ ಸಂದರ್ಭದಲ್ಲಿ ರಾಜಕೀಯ ಕೇಳಿದ್ರಾ? ಅದೂ ಒಂದು ದುರಂತವೇ. ಅಲ್ಲಿ ಕೂಡ ನಿಷ್ಕಲ್ಮಷರು ಬಲಿಯಾದ್ರು. ಆದರೆ ನಾವು ಆಗ ರಾಜಕೀಯ ಮಾಡಿಲ್ಲ, ಬೆಂಬಲ ನೀಡಿದ್ದೇವೆ” ಎಂದು ಹೇಳಿದರು.

“ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಡಾ. ರಾಜ್‌ಕುಮಾರ್ ಅಂತ್ಯಕ್ರಿಯೆಯಲ್ಲಿ ಘೋರ ಅವ್ಯವಸ್ಥೆ ಕಂಡುಬಂದಿತ್ತು. ಆಗ ಅವರು ರಾಜೀನಾಮೆ ಕೊಟ್ಟಿದ್ರಾ? ಆಗ ಅವಿತುಕೊಂಡು ಕೂತಿದ್ದರು ಎಂದು ವ್ಯಂಗ್ಯ ಮಾಡಿದರು.

ಈ ದುರಂತಕ್ಕೆ, ಸಾವು-ನೋವಿಗೆ ಎಲ್ಲರೂ ಕಾರಣ. ಎಲ್ಲರೂ ಈ ವಿಚಾರಕ್ಕೆ ತಲೆತಗ್ಗಿಸಬೇಕಿದೆ. ಇದರಲ್ಲಿ ಸರ್ಕಾರದ ವೈಫಲ್ಯವೂ ಇದೆ. ಪೆಹಲ್ಗಾಮ್‌ನಲ್ಲಿ ಆದ ದುರಂತ ಕೇಂದ್ರ ಸರ್ಕಾರದ ವೈಫಲ್ಯ ಅಲ್ವಾ? ಕುಮಾರಸ್ವಾಮಿ ಅವ್ರು ಪ್ರಧಾನಮಂತ್ರಿ, ಹೋಂ ಮಿನಿಸ್ಟರ್ ರಾಜೀನಾಮೆ ಕೇಳಿದ್ರಾ? ಹೌದು, ಅದು ಉಗ್ರರ ಅಟ್ಟಹಾಸ, ಅಮಾಯಕರು ಬಲಿಯಾದ್ರು‌. ಅದರಲ್ಲಿ ನಾವು ರಾಜಕೀಯ ಮಾಡಲಿಲ್ಲ, ವಿಪಕ್ಷಗಳು ಬೆಂಬಲ ಕೊಡಲಿಲ್ವಾ? ಈ ಕಾಲ್ತುಳಿತ ಪ್ರಕರಣ ಕೂಡಾ ಅನಿರೀಕ್ಷಿತ ಅವಘಡ. ಲಕ್ಷಾಂತರ ಜನರು ಒಂದೇ ಕಡೆ ಸೇರಿದ್ರೆ ಅನಿರೀಕ್ಷಿತ ಘಟನೆ ನಡೆಯೋದು ಸಹಜ. ಇದರಲ್ಲಿ ರಾಜಕೀಯ ಬೇಡ” ಎಂದು ಅವರು ಹೇಳಿಕೆ ಕೊಟ್ಟರು.