ಬೆಂಗಳೂರು: ನಗರದಲ್ಲಿ ಇಂದಿನಿಂದ ಆರಂಭವಾಗಲಿರುವ ‘ಇನ್‌ವೆಸ್ಟ್ ಕರ್ನಾಟಕ 2025’ ಹೂಡಿಕೆ ಸಮಾವೇಶದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಅನುಪಸ್ಥಿತಿ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸತತ ಮೂರನೇ ಸಲವೂ ‘ಶೂನ್ಯ’ ಸಾಧನೆ ಮಾಡಿ ಅವಮಾನಗೊಂಡಿರುವುದಕ್ಕೆ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಬರಲು ಮುಜುಗರ ಪಡುತ್ತಿದ್ದಾರೆಯೇ?, ಅಥವಾ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಗುಂಪುಗಾರಿಕೆಯನ್ನು ಎದುರಿಸಲು ರಾಹುಲ್ ಹೆದರುತ್ತಿದ್ದಾರೆಯೇ? ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಸಂಸತ್ತಿನ ಬಜೆಟ್ ಅಧಿವೇಶನದ ಮೇಲಿನ ಚರ್ಚೆಯಲ್ಲಿ ತಲ್ಲೀನರಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಲಿರುವ ‘ಇನ್‌ವೆಸ್ಟ್ ಕರ್ನಾಟಕ 2025’ ಹೂಡಿಕೆ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ ಬೆನ್ನಲ್ಲೇ ಆರ್.ಅಶೋಕ ಈ ಪೋಸ್ಟ್ ಮಾಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗಿಂತ ಗಾಂಧಿ ಕುಟುಂಬದವರು ಯಾವಾಗಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ಒಲವು ತೋರಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ, ಅದು ಎಲ್ಲರಿಗೂ ತಿಳಿದಿದೆ. ರಾಹುಲ್ ಗಾಂಧಿ ಹಾಗೂ ಡಿ.ಕೆ.ಶಿವಕುಮಾರ್ ಒಬ್ಬರನ್ನೊಬ್ಬರನ್ನು ನೋಡುತ್ತಿಲ್ಲ ಎಂದು ಅನಿಸುತ್ತಿದೆ ಎಂದು ಅಶೋಕ ಹೇಳಿದ್ದಾರೆ.














